
Bengaluru: ಹಿರಿಯ ಪತ್ರಕರ್ತ ಮತ್ತು ಕನ್ನಡ ಡಿಜಿಟಲ್ ಮಾಧ್ಯಮದ (Kannada digital media) ಪಿತಾಮಹರೆನಿಸಿದ ಎಸ್.ಕೆ. ಶ್ಯಾಮಸುಂದರ್ (S.K. Shyamasunder) ಸೋಮವಾರ ರಾತ್ರಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದಯಾಘಾತದಿಂದ ಅವರು ಇಹಲೋಕ ತ್ಯಜಿಸಿದರು.
ಸಿದ್ದರಾಮಯ್ಯ ಅವರು ಎಸ್.ಕೆ. ಶ್ಯಾಮಸುಂದರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಬರಹವನ್ನೇ ಜೀವನವನ್ನಾಗಿ ಮಾಡಿದ್ದ ಶ್ಯಾಮಸುಂದರ್ ಅವರ ಅಗಲಿಕೆ ದುಃಖದ ಸಂಗತಿ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಕುಟುಂಬಕ್ಕೆ ಧೈರ್ಯ ಸಿಗಲಿ,” ಎಂದು ಅವರು ಎಕ್ಸ್ (ಹಳೆ ಟ್ವಿಟರ್) ನಲ್ಲಿ ತಿಳಿಸಿದ್ದಾರೆ.
ಶ್ಯಾಮಸುಂದರ್ ಅವರು ಸುಮಾರು 39 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದರು. ಪ್ರಿಂಟ್ ಮತ್ತು ಡಿಜಿಟಲ್ ಮಾಧ್ಯಮ ಎರಡರಲ್ಲೂ ಅವರು ಮಹತ್ವದ ಕೊಡುಗೆ ನೀಡಿದ್ದರು. ಕನ್ನಡ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಅವರು ಹರಿಕಾರರಾಗಿದ್ದು, ಈ ವಲಯದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.
ಅವರು ಹಲವು ಸುದ್ದಿಚಾನಲ್‌ಗಳ ಚರ್ಚೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಚಿತ್ರರಂಗದಲ್ಲಿಯೂ ‘ಎದ್ದೇಳು ಮಂಜುನಾಥ’ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದರು. ಮೂಲತಃ ಚಿತ್ರದುರ್ಗ ಜಿಲ್ಲೆಯ ಜಾನಕೊಂಡ ಗ್ರಾಮದವರಾದ ಶ್ಯಾಮಸುಂದರ್, ಬೆಂಗಳೂರಿನಲ್ಲಿ ವಾಸವಿದ್ದು, ಅವರು ಅವಿವಾಹಿತರಾಗಿದ್ದರು.