Bengaluru : ರಾಜ್ಯದಲ್ಲಿ Covid-19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವೃದ್ಧರು, ಗರ್ಭಿಣಿಯರು, ಹೃದಯ ಮತ್ತು ಶ್ವಾಸಕೋಶ ಸಮಸ್ಯೆ ಇರುವ ನಾಗರಿಕರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಲು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಹಾಗೂ ವಿವಿಧ ಇಲಾಖೆಗಳ ಸಚಿವರ ಸಭೆಯಲ್ಲಿ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ನಿರ್ಧರಿಸಲಾಯಿತು. ಮುಖ್ಯಮಂತ್ರಿ ಅವರು, “ಇದೀಗ ತೀವ್ರ ಆತಂಕದ ಸ್ಥಿತಿ ಇಲ್ಲದಿದ್ದರೂ ಮುಂಬರುವ ದಿನಗಳಲ್ಲಿ ಏನೆಲ್ಲಾ ಸಂಭವಿಸಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಯಂತ್ರವನ್ನು ಮುನ್ನೆಚ್ಚರಿಕೆಯಿಂದ ಸಜ್ಜುಗೊಳಿಸಬೇಕು” ಎಂದು ಸೂಚಿಸಿದರು.
ವಿಮಾನ ನಿಲ್ದಾಣಗಳಿಂದ ರಾಜ್ಯ ಪ್ರವೇಶಿಸುವ ಪ್ರಯಾಣಿಕರ ಮೇಲೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ. ಹೊರ ರಾಜ್ಯದಿಂದ ರಾಜ್ಯಕ್ಕೆ ಬರುತ್ತಿರುವವರ ಆರೋಗ್ಯ ತಪಾಸಣೆಗೆ ಪ್ರತ್ಯೇಕ ಘಟಕಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ವೆಂಟಿಲೇಟರ್, ಆಮ್ಲಜನಕ, ಔಷಧಗಳಂತಹ ಪರಿಕರಗಳನ್ನು ಅಗತ್ಯಕ್ಕೆ ತಕ್ಕಂತೆ ಸಿದ್ಧಪಡಿಸಬೇಕು ಎಂದು ಸಚಿವರು ಹಾಗೂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಜನಸಾಮಾನ್ಯರಿಗೆ ನೆರವಾಗುವ ಉದ್ದೇಶದಿಂದ ಕೋವಿಡ್ ಸಹಾಯವಾಣಿ ಆರಂಭಿಸಲು ಸೂಚನೆ ನೀಡಲಾಗಿದೆ. ಪರಿಸ್ಥಿತಿಯನ್ನು ನಿಯಮಿತವಾಗಿ – ಪ್ರತಿ ವಾರ ಅಥವಾ ಮೂರು ದಿನಕ್ಕೊಮ್ಮೆ ಪರಿಶೀಲಿಸುವ ಮೂಲಕ ಆರೋಗ್ಯದ ಮೇಲಿರುವ ಒತ್ತಡವನ್ನು ಸಮರ್ಥವಾಗಿ ನಿರ್ವಹಿಸಲು ಸಲಹೆ ನೀಡಲಾಗಿದೆ.
ವಿಶೇಷವಾಗಿ ಗರ್ಭಿಣಿಯರನ್ನು ಆಸ್ಪತ್ರೆಗಳಿಂದ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸದಂತೆ ಸೂಚನೆ ನೀಡಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ ಬೇಕಾದ ತುರ್ತು ವೈದ್ಯಕೀಯ ಸೌಲಭ್ಯಗಳು ಲಭ್ಯವಿರಬೇಕು ಎಂಬ ನಿರ್ದೇಶನವನ್ನೂ ನೀಡಲಾಗಿದೆ.