Bengaluru: ಕರ್ನಾಟಕ ರಾಜ್ಯೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದೆ. ರಾಜ್ಯೋತ್ಸವ ಪ್ರಶಸ್ತಿ – 2024ರ ಪ್ರದಾನ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ-50ರ (Karnataka Suvarna Sambhrama) ಸಮಾರೋಪ ಸಮಾರಂಭದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದು, ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅದರಲ್ಲಿ ಪ್ರಮುಖವಾಗಿ ಕರ್ನಾಟಕ ಸುವರ್ಣ ಸಂಭ್ರಮ-50ರ(Karnataka Suvarna Sambhrama) ಸಮಾರೋಪವನ್ನು ಕನ್ನಡ ಜನೋತ್ಸವವಾಗಿ ಅದ್ಧೂರಿಯಾಗಿ ಆಚರಿಸಬೇಕು ಎನ್ನುವುದು ಸಹ ಒಂದಾಗಿದೆ. ಕರ್ನಾಟಕದ ಯುವ ಸಮೂಹಕ್ಕೆ ಕರ್ನಾಟಕದ ಜನರ ಚಳುವಳಿ, ಕನ್ನಡದ ಹಿರಿಮೆ ಸೇರಿದಂತೆ ಕರ್ನಾಟಕದ ಹೋರಾಟದ ಪಯಣವನ್ನು ಹಾಗೂ ಕನ್ನಡದ ಇತಿಹಾಸವನ್ನು ತಿಳಿಸಬೇಕು. ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಂಗೀತ, ಸಾಹಿತ್ಯ, ಜನಪದ ಹಾಗೂ ಚರಿತ್ರೆ ಸೇರಿದಂತೆ ಎಲ್ಲ ಮಹತ್ವದ ಅಂಶಗಳನ್ನು ಸಹ ಒಳಗೊಂಡಿರಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ರಾಜ್ಯೋತ್ಸವ ಸಂಭ್ರಮ ಪ್ರಮುಖ ಅಂಶಗಳು
- 1 ಕರ್ನಾಟಕ ಸಾಹಿತ್ಯ ಅಕಾಡೆಮಿಯು 50 ಸಾಧಕ ಮಹಿಳೆಯರ ಪರಿಚಯ ಮಾಡುವ ನಿಟ್ಟಿನಲ್ಲಿ 100 ಪುಟಗಳ 50 ಕೃತಿಗಳನ್ನು ಮುದ್ರಿಸಲಿದೆ.
- 2 ವಿಧಾನಸೌಧ ಆವರಣದಲ್ಲಿ 25ಅಡಿ ಎತ್ತರದ ಭುವನೇಶ್ವರಿದೇವಿ ಕಂಚಿನ ಪ್ರತಿಮೆ ನಿರ್ಮಾಣ ಆಗುತ್ತಿದೆ. ಇದನ್ನು ಇದೇ ನವೆಂಬರ್ 1ಕ್ಕೆ ಸಿದ್ದರಾಮಯ್ಯ ಅನಾವರಣ ಮಾಡಲಿದ್ದಾರೆ.
- 3 ಕರ್ನಾಟಕದ ನಾಲ್ಕು ವಲಯಗಳಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ. ಮೈಸೂರಲ್ಲಿ ಚಿಂತನಾ ಸಮಾವೇಶ, ರಾಯಚೂರಿಗೆ ಗೋಕಾಕ್ ಚಳವಳಿ ಸಂಸ್ಮರಣೆ, ಮಹಾರಾಷ್ಟ್ರದ ಜತ್ ತಾಲ್ಲೂಕಿನಲ್ಲಿ ಗಡಿನಾಡು ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಅಲ್ಲದೇ ಮಂಗಳೂರಿನಲ್ಲಿ ವಿವಿಧ ಅಕಾಡೆಮಿ ಸಹಯೋಗದಲ್ಲಿ ಬಹುಸಂಸ್ಕೃತಿ ಉತ್ಸವವನ್ನು ನಡೆಸಲು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.
- 4 ಮನೆ ಮನೆಯಲ್ಲಿ ಕನ್ನಡ ಬಾವುಟ ಹಾರಿಸಲು ಮನವಿ.
- 5 ನಾಡಿನ ಬಹು ಸಂಸ್ಕೃತಿ, ಸೌಹಾರ್ದ ಸಂಸ್ಕೃತಿ, ಬಹುತ್ವ ಸಾರುವ 100 ಪುಸ್ತಕ. ಡಿಸೆಂಬರ್‌ನಲ್ಲಿ ಬಿಡುಗಡೆ.
- 6 ರಾಜ್ಯ ಕಲೆ, ಸಾಹಿತ್ಯ, ಕೃಷಿ, ತೋಟಗಾರಿಕೆ ಹಾಗೂ ಕೈಗಾರಿಕೆ ಬಗ್ಗೆ ವಿವರಿಸುವ 5 ಸಂಪುಟ.
- 7 ಕನ್ನಡದ ಸಾಹಿತಿಗಳ ನುಡಿಮುತ್ತುಗಳನ್ನು ಎಲ್ಲಾ ಜಿಲ್ಲೆಗಳ ಪ್ರಮುಖ ಸ್ಥಳ ಹಾಗೂ ಕೆಎಸ್ಆರ್ಟಿಸಿಯಲ್ಲಿ ಪ್ರಚಾರ ಮಾಡುವಂತೆ ಸೂಚನೆ.
- 8 ಕರ್ನಾಟಕದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸಕ್ಕೆ ಸಿದ್ಧತೆ.
ರಾಜ್ಯೋತ್ಸವ ಪ್ರಶಸ್ತಿಗೆ ಆನ್ಲೈನ್ ಅರ್ಜಿ
ರಾಜ್ಯೋತ್ಸವ ಪ್ರಶಸ್ತಿಗೆ ಆನ್ಲೈನ್ನ ಮೂಲಕವೂ ನೀವು ಅರ್ಜಿ ಸಲ್ಲಿಸಬಹುದಾಗಿದೆ. ಈ ಬಾರಿ ಆನ್ಲೈನ್ನ ಮೂಲಕವೂ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗಿದ್ದು, ಸೆಪ್ಟಂಬರ್ 30ರ ಒಳಗೆ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಇನ್ನು ಈ ಬಾರಿ 69ನೇ ಕನ್ನಡ ರಾಜ್ಯೋತ್ಸವದ ಭಾಗವಾಗಿ 69 ಜನ ಗಣ್ಯರನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ. ಕನ್ನಡ ನಾಡಿಗೆ ಸೇವೆ ಸಲ್ಲಿಸಿದ 69 ಜನ ಗಣ್ಯರನ್ನು ಈ ಸಮಾರಂಭದಲ್ಲಿ ಸನ್ಮಾನಿಸಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಆಯ್ಕೆಗೆ ಸಮಿತಿ ರಚಿಸಲಾಗಿದೆ.