Bengaluru: ನೈರುತ್ಯ ಮುಂಗಾರು ಮಳೆ ಆರಂಭದಲ್ಲಿ ಭರವಸೆ ಹುಟ್ಟಿಸಿ ಕಳೆದ ಎರಡು ವಾರಗಳಿಂದ ದುರ್ಬಲಗೊಂಡಿದೆ. ಮುಂಗಾರು ಹಂಗಾಮಿನ ಮೆಕ್ಕೆಜೋಳ, ರಾಗಿ, ಶೇಂಗಾ, ಉದ್ದು, ಹೆಸರು, ಅಲಸಂದೆ, ತೊಗರಿ ಸೇರಿದಂತೆ ಹಲವು ಬೆಳೆಗಳಿಗೆ ತೇವಾಂಶದ ಕೊರತೆ ಉಂಟಾಗಿ ಒಣಗುತ್ತಿವೆ.
ರಾಜ್ಯದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಸೆಪ್ಟೆಂಬರ್ ತಿಂಗಳ ಎರಡೂ ವಾರದಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿಲ್ಲ. ಹೀಗಾಗಿ ರೈತರು ಮಳೆ ನಿರೀಕ್ಷೆಯಲ್ಲೇ ಕಾಲ ಕಳೆಯಿವಂತಾಗಿದ್ದು, ಬೆಳೆಗೆ ನೀರಿಲ್ಲದೆ ಒಣಗುತ್ತಿವೆ. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಸೆಪ್ಟೆಂಬರ್ ಒಂದರಿಂದ ನಿನ್ನೆಯವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.7ರಷ್ಟು ಕಡಿಮೆ ಮಳೆಯಾಗಿದೆ.
ಉತ್ತರ ಒಳನಾಡಿನಲ್ಲಿ ವಾಡಿಕೆ ಮಳೆ ಪ್ರಮಾಣ 60.3 ಮಿ.ಮೀ. ಇದ್ದು, 49.1 ಮಿ.ಮೀ.ನಷ್ಟು ಮಳೆಯಾಗಿದೆ. ವಾಡಿಕೆಗಿಂತ ಶೇ.19ರಷ್ಟು ಮಳೆ ಕೊರತೆ ಉಂಟಾಗಿದೆ.ಕಳೆದ ಎರಡು ವಾರದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.85 ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರಾಮನಗರ ಶೇ.77, ಕೋಲಾರ ಶೇ.90, ಚಿಕ್ಕಬಳ್ಳಾಪುರ ಶೇ.86, ತುಮಕೂರು ಶೇ.73, ಚಿತ್ರದುರ್ಗ ಶೇ.66, ದಾವಣಗೆರೆ ಶೇ.45, ಚಾಮರಾಜನಗರ ಶೇ.81, ಮೈಸೂರು ಶೇ.45, ಮಂಡ್ಯ ಶೇ.83 ರಷ್ಟು ಮಳೆ ಕೊರತೆಯಾಗಿದೆ.
ಉಳಿದಂತೆ ಕೆಲವು ಜಿಲ್ಲೆಗಳಲ್ಲಿ ವಾಡಿಕೆ ಇಲ್ಲವೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಸದ್ಯಕ್ಕೆ ಜೋರು ಮಳೆಯಾಗುವ ಲಕ್ಷಣಗಳಿಲ್ಲ. ಅಲ್ಲಲ್ಲಿ ಚದುರಿದಂತೆ ಹಗರುದಿಂದ ಸಾಧಾರಣ ಮಳೆಯಾಗಬಹುದು. ಮೋಡ ಕವಿದ ವಾತಾವರಣ ಮುಂದುವರೆಯಲಿದೆ.