
ಕಾರವಾರ ನೌಕಾನೆಲೆಯ (Karwar Naval Base) ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದ ಆರೋಪದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುದುಗಾ ಗ್ರಾಮದ ವೇತನ ತಾಂಡೇಲ್ ಮತ್ತು ಹಳವಳ್ಳಿಯ ಅಕ್ಷಯ್ ನಾಯ್ಕ್ ಎಂಬ ಇಬ್ಬರನ್ನು ಹೈದರಾಬಾದ್ ಮೂಲದ ಎನ್ಐಎ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಸೋಮವಾರ ಎನ್ಐಎ ತಂಡ ಕಾರವಾರಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿತು.
2024ರ ಆಗಸ್ಟ್‌ನಲ್ಲಿ ನೌಕಾನೆಲೆ ಮಾಹಿತಿ ಸೋರಿಕೆ ಪ್ರಕರಣದ ಸಂಬಂಧ ಮೂವರನ್ನು ವಿಚಾರಣೆ ನಡೆಸಿ ನೋಟಿಸ್ ನೀಡಿ ಬಿಟ್ಟಲಾಗಿತ್ತು. ಮುದುಗಾದ ವೇತನ ತಾಂಡೇಲ್, ತೋಡೂರಿನ ಸುನೀಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕ್ ಅವರನ್ನು ವಿಚಾರಣೆ ನಡೆಸಿ ಬಳಿಕ ಬಿಡುಗಡೆ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ತನಿಖೆ ಕೈಗೊಂಡ ಎನ್ಐಎ ಇಬ್ಬರನ್ನು ಬಂಧಿಸಿದೆ.
ಪಾಕಿಸ್ತಾನದ ಏಜೆಂಟ್ ಹನಿಟ್ರ್ಯಾಪ್ ಮಾಡಿ ಫೇಸ್‌ಬುಕ್ ಮೂಲಕ ಮರೈನ್ ಅಧಿಕಾರಿ ಎಂಬ ನೆಪದಲ್ಲಿ ಆರೋಪಿ ವೇತನ ತಾಂಡೇಲ್, ಸುನೀಲ್ ಮತ್ತು ಅಕ್ಷಯ್ ನಾಯ್ಕ್ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದಳು. ಈ ಪ್ರಕ್ರಿಯೆ 2023ರಲ್ಲಿ ಆರಂಭಗೊಂಡಿತ್ತು.
ವೇತನ ತಾಂಡೇಲ್ ಮತ್ತು ಅಕ್ಷಯ್ ನಾಯ್ಕ್ ಕಾರವಾರದ ಚೆಂಡ್ಯಾದಲ್ಲಿರುವ ಮರ್ಕ್ಯುರಿ ಹಾಗೂ ಅಲ್ಟ್ರಾ ಮರೈನ್ ಕಂಪೆನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಸುನೀಲ್ ಮೊದಲು ಸೀಬರ್ಡ್ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿ, ನಂತರ ಚಾಲಕ ವೃತ್ತಿ ಮಾಡುತ್ತಿದ್ದನು.
ಎನ್ಐಎ ಪೊಲೀಸರು ಈಗಾಗಲೇ ವಿಚಾರಣೆಗೆ ಒಳಪಡಿಸಿದವರನ್ನು ಮತ್ತೆ ವಶಕ್ಕೆ ಪಡೆದು ಹೊಸ ಸಂಪರ್ಕಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇಂದೇ ನೌಕಾನೆಲೆ ಅಧಿಕಾರಿಗಳನ್ನೂ ಎನ್ಐಎ ಭೇಟಿ ಮಾಡಲಿದೆ. ಪ್ರಕರಣದಲ್ಲಿ ಇನ್ನಷ್ಟು ಜನರು ಶಾಮೀಲಾಗಿರುವ ಶಂಕೆ ಹಿನ್ನೆಲೆ ತನಿಖೆ ಮುಂದುವರಿಯಲಿದೆ.