Srinagar: ಜಮ್ಮು-ಕಾಶ್ಮೀರದ (Kashmir) ಪಹಲ್ಗಾಂನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಗಂಭೀರ ಗಾಯಾಳುಗಳಿಗೆ ₹2 ಲಕ್ಷ ಮತ್ತು ಸಣ್ಣ ಗಾಯಗಳಿಗೆ ₹1 ಲಕ್ಷ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
26 ಮಂದಿಯ ಮೃತದೇಹಗಳನ್ನು ಶ್ರೀನಗರದ ಸರ್ಕಾರಿ ಮೆಡಿಕಲ್ ಕಾಲೇಜಿಗೆ ತೆಗೆದುಕೊಂಡು ಹೋಗಲಾಗಿದೆ. ಬಳಿಕ ಅವರನ್ನು ಪೊಲೀಸ್ ನಿಯಂತ್ರಣ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಶೋಕ ವ್ಯಕ್ತಪಡಿಸಿದರು.
ಗೃಹ ಸಚಿವ ಅಮಿತ್ ಶಾ ಮೃತರ ಕುಟುಂಬಗಳನ್ನು ಭೇಟಿಯಾಗಿ ಧೈರ್ಯ ತುಂಬಿದರು ಮತ್ತು ದಾಳಿ ಮಾಡಿದವರಿಗೆ ತಕ್ಕ ಶಿಕ್ಷೆ ನೀಡುವುದಾಗಿ ಭರವಸೆ ನೀಡಿದರು. ಪ್ರವಾಸಿಗರು ತಮ್ಮ ಮನೆಗಳಿಗೆ ಸುರಕ್ಷಿತವಾಗಿ ಹೋಗಲು ಸರಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.
ಈ ಭಯಾನಕ ದಾಳಿಗೆ ಸಂಬಂಧಿಸಿದ ತನಿಖೆಗಾಗಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕಾಶ್ಮೀರಕ್ಕೆ ಇಂದು ಹೋಗುತ್ತಿದೆ. ಇನ್ಸ್ಪೆಕ್ಟರ್ ಜನರಲ್ ನೇತೃತ್ವದ ತಂಡ ಪಹಲ್ಗಾಂಗೆ ತೆರಳಲಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪೆರು ಮತ್ತು ಅಮೆರಿಕದ ಭೇಟಿಯನ್ನು ರದ್ದುಪಡಿಸಿ, ಇಂದು ನಡೆಯುವ ಸಂಪುಟ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
35 ವರ್ಷಗಳಲ್ಲಿ ಮೊದಲ ಬಾರಿಗೆ ಕಾಶ್ಮೀರದಾದ್ಯಂತ ಭಯೋತ್ಪಾದನೆಯ ವಿರುದ್ಧ ಬಂದ್ ಆಚರಿಸಲಾಗಿದೆ. ಜನ ಸಾಮಾನ್ಯರು, ರಾಜಕೀಯ ಪಕ್ಷಗಳು, ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳು ಇದರ ಬೆಂಬಲ ನೀಡಿದ್ದಾರೆ.
ಪಹಲ್ಗಾಂ ದಾಳಿಯನ್ನು ಖಂಡಿಸಿ ಹಲವು ಪತ್ರಿಕೆಗಳು ಬುಧವಾರ ಕಪ್ಪು ಮುಖಪುಟ ಮುದ್ರಿಸಿದವು. ಪ್ರವಾಸಿಗರು ತಮ್ಮ ಊರಿಗೆ ತಲುಪಲು ಸೌಲಭ್ಯ ಕಲ್ಪಿಸಲು ಸರ್ಕಾರ ಕ್ರಮ ಕೈಗೊಂಡಿದೆ. ವಿಮಾನ ದರಗಳನ್ನು ಏರಿಸದಂತೆ ಸೂಚನೆ ನೀಡಲಾಗಿದ್ದು, ಹೆಚ್ಚುವರಿ ವಿಮಾನಗಳು ಕಲ್ಪಿಸಲಾಗುತ್ತಿದೆ.
ಪ್ರಧಾನಿ ಮೋದಿ ಅವರು ತಮ್ಮ ಸೌದಿ ಅರೇಬಿಯಾದ ಪ್ರವಾಸವನ್ನು ಮೊಟಕು ಮಾಡಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲೇ ಎನ್‌ಎಸ್‌ಎ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೆ ತುರ್ತು ಸಭೆ ನಡೆಸಿದರು.