Kolar : ದಕ್ಷಿಣ ಕಾಶಿಯಾಗಿ ಪ್ರಸಿದ್ಧಿ ಪಡೆದ ಕೋಲಾರದ ಅಂತರಗಂಗೆಯ ಕಾಶಿ ವಿಶ್ವೇಶ್ವರನ ಸನ್ನಿಧಿಯಲ್ಲಿ ಸೋಮವಾರ ಸಂದರ್ಭೋಚಿತ ವೈಭವದ ಪೂಜೆ ನಡೆಯಿತು. ಪ್ರತಿ ಕೊರೆಯ ಮೂಲದಿಂದ ಸಾವಿರಾರು ಭಕ್ತರು ಕ್ಷೇತ್ರದತ್ತ ಹರಿದು ಬಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅಂತರಗಂಗೆಯ ಪ್ರಸಿದ್ಧ ಕಲ್ಯಾಣಿ ಬಳಿ ಕಲ್ಲಿನ ಬಸವನ ಬಾಯಿಂದ ಹರಿಯುವ ಪವಿತ್ರ ಜಲದಿಂದ ಅಭಿಷೇಕ ಮಾಡಿಕೊಂಡು ಭಕ್ತರು ಪೂಜೆ ಸಲ್ಲಿಸಿದರು.
ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಬಸ್ ನಿಲ್ದಾಣದಿಂದ ಅಂತರಗಂಗೆಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಯಿತು. ಭಕ್ತರಿಗಾಗಿ ಬೃಹತ್ ಸ್ವಾಗತ ಕಮಾನುಗಳು, ಬಂಟಿಂಗ್, ಭಗವಧ್ವಜ, ಮತ್ತು ವಿದ್ಯುತ್ ದೀಪಾಲಂಕಾರಗಳಿಂದ ಇಡೀ ಪರಿಸರ ಕೇಸರಿಮಯಗೊಂಡಿತ್ತು.
ಅಂತರಗಂಗೆಯ ಜಲಕಂಠೇಶ್ವರ ಮತ್ತು ಕಾಶಿ ವಿಶ್ವೇಶ್ವರ ದೇವಾಲಯಗಳಲ್ಲಿ ಪ್ರಾತಃಕಾಲದಿಂದಲೇ ರುದ್ರಾಭಿಷೇಕ, ಫಲಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಹಾಗೂ ಮಹಾಮಂಗಳಾರತಿ ನಡೆಯಿತು. ಪ್ರಧಾನ ಅರ್ಚಕರಾದ ಮಂಜುನಾಥ ದೀಕ್ಷಿತ್ ಮತ್ತು ವೆಂಕಟೇಶ್ ದೀಕ್ಷಿತ್ ನೇತೃತ್ವದಲ್ಲಿ ಪೂಜೆಗಳು ನಡೆಯವು.
ಬೆಟ್ಟದ ತಪ್ಪಲಿನಲ್ಲಿರುವ ಜಲಕಂಠೇಶ್ವರ ದೇವಾಲಯದಲ್ಲಿ ಅನೇಕ ಸಂಘಟನೆಗಳಿಂದ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಸೇವಾ ಕಾರ್ಯದಲ್ಲಿ ಅನೇಕ ಸ್ವಯಂಸೇವಕರು ಪಾಲ್ಗೊಂಡು ಭಕ್ತರಿಗೆ ಸಹಾಯ ಮಾಡಿದರು.