
Hubballi : ಹುಬ್ಬಳ್ಳಿಯ (Hubballi) ಚನ್ನಮ್ಮ ವೃತ್ತದ ಪಕ್ಕದಲ್ಲಿರುವ ಈದ್ಗಾ ಮೈದಾನದ (Eidgah ground) ಎರಡು ಕಡೆಯ ಕಂಪೌಂಡ್ಗಳನ್ನು ತೆರವುಗೊಳಿಸಲಾಗಿದೆ. ಗದಗ ರಸ್ತೆ ಮತ್ತು ವಿಜಯಪುರ ರಸ್ತೆಯ ಪಕ್ಕದಲ್ಲಿದ್ದ ಈ ಕಂಪೌಂಡ್ಗಳನ್ನು ಪ್ಲೈಓವರ್ ಕಾಮಗಾರಿ ಸುಗಮವಾಗಿಸಲು ತೆರವುಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಮೈದಾನದ ಒಳಗಿರುವ ಹಲವಾರು ಮರಗಳನ್ನು ಕೂಡ ಕಡಿದು ಹಾಕಲಾಗಿದೆ. ಮೈದಾನ ಒಟ್ಟು 1.5 ಎಕರೆ ವಿಸ್ತೀರ್ಣ ಹೊಂದಿದ್ದು, ಈಗ ಪ್ಲೈಓವರ್ ನಿರ್ಮಾಣದ ಅವಶ್ಯಕತೆಯಿಂದಾಗಿ ಈ ಭಾಗದ ಜಾಗ ಬಳಸಲಾಗುತ್ತಿದೆ.
ಫ್ಲೈಓವರ್ ಚನ್ನಮ್ಮ ವೃತ್ತದಿಂದ ಗದಗ ರಸ್ತೆ ಹಾಗೂ ವಿಜಯಪುರ ರಸ್ತೆಯ ಕಡೆಗೆ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿ ಆರಂಭಿಸಲು ಪುರಸಭೆ ಗುತ್ತಿಗೆದಾರ ಕಂಪನಿಗೆ ಅನುಮತಿ ನೀಡಿರುವುದರಿಂದ ಕಳೆದ ಎರಡು ದಿನಗಳಿಂದ ಈದ್ಗಾ ಮೈದಾನದ ಭಾಗ ತೆರವುಗೊಳ್ಳುತ್ತಿದೆ.
ಈದ್ಗಾ ಮೈದಾನ ಹಲವು ಹೋರಾಟಗಳಿಗೆ ಸಾಕ್ಷಿಯಾಗಿದೆ. ಬ್ರಿಟಿಷ್ ಕಾಲದಲ್ಲಿ ಈ ಜಾಗವನ್ನು ಹುಬ್ಬಳ್ಳಿ ಅಂಜುಮನ್ ಸಂಸ್ಥೆಗೆ ವರ್ಷದಲ್ಲಿ ಎರಡು ಬಾರಿ ಪ್ರಾರ್ಥನೆ ನಡೆಸಲು 999 ವರ್ಷಗಳ ಲೀಸ್ ಮೇಲೆ ನೀಡಲಾಗಿತ್ತು. ಆದರೆ, ಸ್ವಾತಂತ್ರ್ಯದ ನಂತರ ಈ ವಿವಾದ ಮುಂದುವರಿಯಿತು.
1980ರಲ್ಲಿ ಅಂಜುಮನ್ ಸಂಸ್ಥೆ ಇಲ್ಲಿ ಮಳಿಗೆ ನಿರ್ಮಿಸಲು ಯತ್ನಿಸಿದ್ದರೆ, ಮಹಾನಗರ ಪಾಲಿಕೆ ಅದನ್ನು ತಡೆಯಿತು. ನಂತರ ಪ್ರಕರಣ ನ್ಯಾಯಾಲಯಕ್ಕೆ ಹೋಗಿ, ಸುಪ್ರೀಂ ಕೋರ್ಟ್ ಈ ಜಾಗ ಪಾಲಿಕೆಗೆ ಸೇರಿದದು ಎಂದು ತೀರ್ಮಾನಿಸಿತು.
1992ರಲ್ಲಿ ತಿರಂಗಾ ಯಾತ್ರೆಯ ಸಂದರ್ಭದಲ್ಲಿ ಈ ಮೈದಾನದಲ್ಲಿ ಧ್ವಜಾರೋಹಣಕ್ಕೆ ಯತ್ನ ನಡೆಸಲಾಗಿತ್ತು, ಅಂಜುಮನ್ ಸಂಸ್ಥೆ ವಿರೋಧ ವ್ಯಕ್ತಪಡಿಸಿದ್ದರಿಂದ ಗಲಾಟೆ ಉಂಟಾಯಿತು. 1994ರಲ್ಲಿ ಉಮಾ ಭಾರತಿ ತಿರಂಗಾ ಹಾರಿಸಲು ಬಯಸಿದಾಗಲೂ ಗಲಾಟೆ ನಡೆಯಿತು ಮತ್ತು ಗೋಲಿಬಾರೂ ನಡೆದಿದೆ.
ಇತ್ತೀಚೆಗೆ, ಈ ಮೈದಾನದಲ್ಲಿ ಮುಸ್ಲಿಂ ಸಮುದಾಯ ವರ್ಷದಲ್ಲಿ ಎರಡು ಬಾರಿ ಪ್ರಾರ್ಥನೆ ಮಾಡುತ್ತಿದ್ದರೆ, ಹಿಂದೂ ಸಮುದಾಯ ಗಣೇಶ ಹಬ್ಬದ ವೇಳೆ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಈಗ ಈ ವಿವಾದಿತ ಮೈದಾನದ ಭಾಗಗಳಲ್ಲಿ ಫ್ಲೈಓವರ್ ನಿರ್ಮಾಣ ಆರಂಭವಾಗಿದೆ.