Hubballi: ಹುಬ್ಬಳ್ಳಿ ನಗರದ ವಿದ್ಯಾನಗರ ಕಲ್ಯಾಣ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ (Ramakrishna Vivekanand Ashram) ಅಧ್ಯಕ್ಷರಾದ ಶ್ರೀ ಸ್ವಾಮಿ ರಘುವೀರಾನಂದ ಮಹಾರಾಜರು (Swami Raghuveerananda Maharaja) ನಿಧರನಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಸೋಮವಾರ ಬೆಳಗ್ಗೆ 10 ಗಂಟೆಗೆ ನಿಧನರಾಗಿದ್ದು, ಗಣ್ಯರು ಕಂಬನಿ ಮಿಡಿದಿದ್ದಾರೆ. ರಘುವೀರಾನಂದ ಮಹಾರಾಜರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ವಿವಿಧ ಮಠಗಳ ಸ್ವಾಮೀಜಿಗಳು, ನಾಗರೀಕರು ಅವರ ಅಂತಿಮ ದರ್ಶನ ಪಡೆದರು.
ಶ್ರೀ ಸ್ವಾಮಿ ರಘುವೀರಾನಂದ ಮಹಾರಾಜರ (Swami Raghuveerananda Maharaja) ಪಾರ್ಥಿವ ಶರೀರವನ್ನು ಭಕ್ತರ ದರ್ಶನಕ್ಕೆಂದು ಆಶ್ರಮದ ಆವರಣದಲ್ಲಿ ಇಡಲಾಗಿದೆ. ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪರಮಪೂಜ್ಯ ವಿಜಯಾನಂದ ಸರಸ್ವತಿ, ಹುಬ್ಬಳ್ಳಿಯ ಸ್ವಾಮಿ ಬುದ್ಧಿಯೋಗಾನಂದಜಿ ಮಹಾರಾಜ, ತೇಜಸಾನಂದಜಿ ಮಹಾರಾಜ, ಹರಿದ್ವಾರದ ಪ್ರಣವಾನಂದ ಸರಸ್ವತಿ, ರಾಣಿಬೆನ್ನೂರಿನ ಆತ್ಮದೀಪಾನಂದಜಿ ಮಹಾರಾಜ, ಗುರುದೇವ ಚರಣಾನಂದಜಿ ಮಹಾರಾಜ, ಮಾತಾ ಆಶ್ರಮದ ಮಾತಾ ತೇಜೋಮಯಿ, ಅಮೂಲ್ಯಮಯಿ, ಆಶ್ರಮದ ಧರ್ಮದರ್ಶಿ ಸಂಭಾಜಿ ಕಲಾಲ ಅವರು ಅಂತಿಮ ದರ್ಶನ ಪಡೆದುಕೊಂಡು ಕಂಬನಿ ಮಿಡಿದಿದ್ದಾರೆ.