
Bengaluru: “ರಾಜ್ಯದಲ್ಲಿ ಮುಖ್ಯಮಂತ್ರಿಗಳ ಹುದ್ದೆಯೂ ಖಾಲಿ ಇಲ್ಲ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಸ್ಥಾನವೂ ಖಾಲಿ ಇಲ್ಲ. ಹೀಗಾಗಿ ಈ ಕುರಿತು ನಡೆಯುತ್ತಿರುವ ಚರ್ಚೆ ಅಪ್ರಸ್ತುತ,” ಎಂದು ಸಚಿವ ಈಶ್ವರ ಖಂಡ್ರೆ (Eshwar Khandre) ಹೇಳಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಯತೀಂದ್ರ ಅವರ ಮಾತುಗಳನ್ನು ಮುಖ್ಯಮಂತ್ರಿಗಳ ಧ್ವನಿ ಎಂದು ಬಿಂಬಿಸುವುದು ಸರಿಯಲ್ಲ. ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಜಾತಿ, ಮತ, ಧರ್ಮದ ಆಧಾರದ ಮೇಲೆ ನಾಯಕತ್ವದ ನಿರ್ಧಾರ ಆಗುವುದಿಲ್ಲ,” ಎಂದರು.
2028ರ ಚುನಾವಣೆಗೂ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, “ಅಂದು ಪಕ್ಷದ ವರಿಷ್ಠರು ಎಲ್ಲ ಜಾತಿ-ಸಮುದಾಯದವರ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ,” ಎಂದರು.
ಈಶ್ವರ ಖಂಡ್ರೆ ಅವರು, “ನವೆಂಬರ್ ಕ್ರಾಂತಿ ಎಂಬ ಮಾತು ಸಂಪೂರ್ಣ ಭ್ರಾಂತಿ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಜನ ಮೆಚ್ಚುಗೆ ಹೆಚ್ಚುತ್ತಿರುವುದರಿಂದ ವಿರೋಧ ಪಕ್ಷಗಳು ಭಯಗೊಂಡಿವೆ,” ಎಂದು ಹೇಳಿದರು.
“ನನಗೆ ಮುಖ್ಯಮಂತ್ರಿಗಳು ಮತ್ತು ಪಕ್ಷದ ವರಿಷ್ಠರು ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ. ಮುಂದಿನ ಪೀಳಿಗೆಯ ಹಿತಕ್ಕಾಗಿ ಕೆಲಸ ಮಾಡುವ ಅವಕಾಶ ದೊರೆತಿದೆ ಎಂಬ ಸಂತೋಷ ನನಗಿದೆ,” ಎಂದು ಹೇಳಿದರು.
“ಮಹಾಪುರುಷರು ವಿಶ್ವದ ಬೆಳಕಾಗಿದ್ದಾರೆ. ಅವರನ್ನು ಯಾವುದೇ ಒಂದು ಜಾತಿ ಅಥವಾ ಜನಾಂಗದ ಸ್ವತ್ತಾಗಿ ಬಿಂಬಿಸುವುದು ತಪ್ಪು. ಎಲ್ಲರನ್ನು ಒಗ್ಗೂಡಿಸುವ ಪ್ರಯತ್ನ ಅಗತ್ಯ,” ಎಂದ ಅವರು, “ವೀರಶೈವ-ಲಿಂಗಾಯತ ಸಮುದಾಯವನ್ನು ಒಗ್ಗೂಡಿಸಲು ಯಾರೇ ಪ್ರಯತ್ನಿಸಿದರೂ ಅದನ್ನು ಸ್ವಾಗತಿಸುತ್ತೇನೆ,” ಎಂದರು.
“ಇಂದು ಸಂಜೆ ದೆಹಲಿಗೆ ತೆರಳುತ್ತಿದ್ದು, ನಾಳೆ ಪಕ್ಷದ ಕೆಲ ವರಿಷ್ಠರನ್ನು ಭೇಟಿ ಮಾಡುವೆ. ಜೊತೆಗೆ ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿರುವ ಅರಣ್ಯ ಶುಲ್ಕ ಪ್ರಕರಣಗಳ ಬಗ್ಗೆ ಹಿರಿಯ ವಕೀಲರೊಂದಿಗೆ ಚರ್ಚೆ ನಡೆಯಲಿದೆ,” ಎಂದರು.
ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರು ಪ್ರವಾಸದಲ್ಲಿರುವ ಕಾರಣ, “ಸರ್ಕಾರದ ಕಾರ್ಯದರ್ಶಿಯನ್ನು ಭೇಟಿ ಮಾಡಿ ಕಾಂಪಾ ನಿಧಿ ಮತ್ತು ಎತ್ತಿನಹೊಳೆ ಯೋಜನೆ ಕುರಿತು ಚರ್ಚೆ ನಡೆಸಲಾಗುವುದು,” ಎಂದರು.
“ಸಕ್ಕರೆಬೈಲು ಶಿಬಿರದ ನಾಲ್ಕು ಆನೆಗಳು ಗಾಯದಿಂದ ಬಳಲುತ್ತಿರುವುದು ತಿಳಿದ ತಕ್ಷಣ ತನಿಖೆ ನಡೆಸಲು ಆದೇಶಿಸಿದ್ದೇನೆ. ತಜ್ಞ ವೈದ್ಯರಿಂದ ಚಿಕಿತ್ಸೆ ನಡೆಯುತ್ತಿದೆ. ರಾಜ್ಯದಲ್ಲಿ ವನ್ಯಜೀವಿ ಪಶುವೈದ್ಯರ ಕೊರತೆ ಇದ್ದು, ಹೊಸ ನೇಮಕಾತಿ ಆಗುವವರೆಗೂ ಪಶುವೈದ್ಯ ಇಲಾಖೆಯಿಂದ ನೆರವು ಪಡೆಯಲು ಸೂಚಿಸಿದ್ದೇನೆ,” ಎಂದು ಸಚಿವರು ಹೇಳಿದರು.

