Shivamogga: ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಲಿಂಗನಮಕ್ಕಿ (Linganamakki) ಜಲಾಶಯವು ಭರ್ತಿಯಾಗುವ ಹಂತ ತಲುಪಿದೆ. ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಯಾವುದೇ ಸಮಯದಲ್ಲೂ ಹೆಚ್ಚಿನ ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL) ಎಚ್ಚರಿಕೆ ನೀಡಿದೆ.
ಜುಲೈ 25, 2025ರ ಮಧ್ಯಾಹ್ನ 1 ಗಂಟೆಗೆ, ಜಲಾಶಯದ ನೀರಿನ ಮಟ್ಟ 1806.80 ಅಡಿಗೆ ತಲುಪಿದ್ದು, ಇದು ಗರಿಷ್ಠ ಮಟ್ಟವಾದ 1819.00 ಅಡಿಯ 75% ಕ್ಕಿಂತ ಹೆಚ್ಚು. ಸುಮಾರು 60,000 ಕ್ಯೂಸೆಕ್‌ಗಿಂತಲೂ ಅಧಿಕ ಒಳ ಹರಿವು ಕಂಡುಬಂದಿರುವ ಹಿನ್ನೆಲೆಯಲ್ಲಿ, ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಹೆಚ್ಚು.
ಅಣೆಕಟ್ಟೆಯ ಸುರಕ್ಷತಿಗಾಗಿ, ಯಾವುದೇ ಮುನ್ನೋಟವಿಲ್ಲದೇ ನೀರನ್ನು ಹೊರಬಿಡುವ ಸಾಧ್ಯತೆ ಇದೆ. ಕಾರ್ಯನಿರ್ವಾಹಕ ಅಭಿಯಂತರರು ಈ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದು, ಜನರು ನದಿಯ ಪಾತ್ರದ ಪ್ರದೇಶದಿಂದ ದೂರವಿರಬೇಕು ಎಂದು ಹೇಳಿದ್ದಾರೆ.
ಸಾರ್ವಜನಿಕರಿಗಾಗಿ ಮುನ್ನೆಚ್ಚರಿಕೆ ಸೂಚನೆಗಳು: ನದಿಯ ಹಳ್ಳಕೆಡುಗಳನ್ನು ಹಾಗೂ ಅಣೆಕಟ್ಟೆಯ ಕೆಳ ಭಾಗದಲ್ಲಿ ವಾಸಿಸುವವರು ತಮ್ಮ ಕುಟುಂಬದ ಸದಸ್ಯರು ಮತ್ತು ಜಾನುವಾರುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿಕೊಳ್ಳಬೇಕು. ಪ್ರವಾಸಿಗರು ನದಿಯ ನೀರಿಗೆ ಇಳಿಯಬಾರದು.
ಪ್ರಮುಖ ಮಾಹಿತಿ
- ಲಿಂಗನಮಕ್ಕಿ ಜಲಾಶಯವು ಶರಾವತಿ ನದಿಯ ಮೇಲೆ ನಿರ್ಮಿತವಾಗಿದ್ದು, ಇದರಿಂದ 1,469.29 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ.
- ಈ ಜಲಾಶಯವು ಇದುವರೆಗೆ 23 ಬಾರಿ ಸಂಪೂರ್ಣವಾಗಿ ತುಂಬಿದೆ.
- ಕಳೆದ ವರ್ಷ (2024) ಅಂದರೆ ಆಗಸ್ಟ್ 1ರಂದು 1814 ಅಡಿಯಲ್ಲಿ ನೀರು ಬಿಡಲಾಗಿತ್ತು.
- ಈ ನೀರು ಗೇರುಸೊಪ್ಪ ಜಲಾಶಯವನ್ನು ಹಾದು ಹೊನ್ನಾವರದ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಯಾವುದೇ ಕ್ಷಣದಲ್ಲಿ ನೀರು ಬಿಡಲಾಗಬಹುದು. ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದಿರಬೇಕು ಮತ್ತು ಅಧಿಕಾರಿಗಳ ಸೂಚನೆ ಪಾಲಿಸಬೇಕು.