
Raipur: ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ (former Chhattisgarh Chief Minister Bhupesh Baghel) ಮತ್ತು ಅವರ ಪುತ್ರ ಚೈತನ್ಯ ಬಘೇಲ್ ಅವರಿಗೆ ಸಂಬಂಧಿಸಿದ ಹಲವಾರು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ.
ಮದ್ಯ ಹಗರಣಕ್ಕೆ (Liquor scam) ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಈ ದಾಳಿ ನಡೆದಿದೆ. ಭಿಲಾಯಿಯಲ್ಲಿರುವ ಚೈತನ್ಯ ಬಘೇಲ್ ನಿವಾಸ ಮತ್ತು ರಾಜ್ಯದ ಇತರ ಕಡೆಗಳಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA Act) ಅಡಿಯಲ್ಲಿ ಈ ದಾಳಿ ನಡೆಸಲಾಗಿದೆ.
ಈ ಬಗ್ಗೆ ಭೂಪೇಶ್ ಬಘೇಲ್ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ನ್ಯಾಯಾಲಯ ವಜಾಗೊಳಿಸಿದ ಪ್ರಕರಣವನ್ನು ಇಡಿ ಮತ್ತೆ ಕೈಗೆತ್ತಿಕೊಂಡಿದೆ. ಈ ರಾಜಕೀಯ ಪಿತೂರಿಯ ಮೂಲಕ ಯಾರಾದರೂ ಪಂಜಾಬ್ ನಲ್ಲಿ ಕಾಂಗ್ರೆಸ್ ಅನ್ನು ತಡೆಯಲು ಪ್ರಯತ್ನಿಸುತ್ತಿದ್ದರೆ, ಅದು ತಪ್ಪು ತಿಳುವಳಿಕೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಛತ್ತೀಸ್ ಗಢ ಮದ್ಯ ಹಗರಣದಿಂದ ರಾಜ್ಯ ಖಜಾನೆಗೆ ಸುಮಾರು 2,100 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಇಡಿ ಹೇಳಿದೆ. ಈ ಪ್ರಕರಣದಲ್ಲಿ ಹಲವಾರು ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳನ್ನು ಈಗಾಗಲೇ ಬಂಧಿಸಲಾಗಿದೆ.
ಇಡಿಗೂ ಎಸಿಬಿಗೂ ಸಂಬಂಧಿಸಿದ ಎಫ್ಐಆರ್ ದಾಖಲಾಗಿದ್ದು, 2 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹಗರಣದ ಬಗ್ಗೆ ಉಲ್ಲೇಖಿಸಲಾಗಿದೆ. ಈ ಹಗರಣವು ಆಗಿನ ಭೂಪೇಶ್ ಸರ್ಕಾರದ ಅವಧಿಯಲ್ಲಿ ನಡೆದಿದ್ದು, ಐಎಎಸ್ ಅಧಿಕಾರಿ ಅನಿಲ್ ತುತೇಜಾ, ಅಬಕಾರಿ ಇಲಾಖೆ ಎಂಡಿ ಎಪಿ ತ್ರಿಪಾಠಿ ಮತ್ತು ಉದ್ಯಮಿ ಅನ್ವರ್ ಧೇಬರ್ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.