Uttar Pradesh : ದೇಶದಲ್ಲಿಯೇ ಮೊದಲ ಬಾರಿಗೆ ‘ಲವ್ ಜಿಹಾದ್’ ಕಾನೂನಿನಡಿಯಲ್ಲಿ (Love Jihad) ಕಾನ್ಪುರ ಯುವಕನಿಗೆ 10 ವರ್ಷಗಳ ಜೈಲು, 30,000 ರೂಪಾಯಿ ದಂಡವನ್ನು ವಿಧಿಸಲಾಗಿದೆ.
2017 ಇಸವಿ ಹಿಂದಿನದು ಎನ್ನಲಾದ ಈ ಪ್ರಕರಣದಲ್ಲಿ ಜಾವೇದ್ ಎಂಬ Kanpur ಯುವಕ ತನ್ನನ್ನು ಮುನ್ನಾ ಎಂದು ಅಪ್ರಾಪ್ತ ವಯಸ್ಕ ಹುಡುಗಿಗೆ ಪರಿಚಯಿಸಿಕೊಂಡಿದ್ದನು ಮತ್ತು ಅವಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದನು, ನಂತರ ಅವರಿಬ್ಬರೂ ದಂಪತಿಗಳಾಗಿ ಮನೆ ಬಿಟ್ಟು ಓಡಿಹೋಗಿದ್ದರು ಎನ್ನಲಾಗಿದೆ. ನಂತರ ಹುಡುಗಿಯು ತನ್ನ ಗಂಡನ ಮನೆಗೆ ಹೋದಾಗ, ಅವನು ತನ್ನ ಗುರುತನ್ನು ಬಹಿರಂಗಪಡಿಸಿ ಮತ್ತು ಅವಳನ್ನು ‘ನಿಕಾಹ್’ ಮಾಡಿಕೊಳ್ಳುವಂತೆ ಒತ್ತಾಯಿಸಿದನು ಎನ್ನಲಾಗಿದೆ. ಅದಕ್ಕೆ ನಿರಾಕರಿಸಿದ ಹುಡುಗಿ, ಯುವಕ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಳು.
ಘಟನೆಯ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರುದಿನ ಯುವಕನನ್ನು ಬಂಧಿಸಿದ್ದರು. ಪೋಕ್ಸೋ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿತ್ತು.
ಉತ್ತರ ಪ್ರದೇಶ “ಧರ್ಮದ ಕಾನೂನುಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆ – 2020” (The Uttar Pradesh Prohibition of Unlawful Conversion of Religion Ordinance, 2020) ರ ಪ್ರಕಾರ ಯಾವುದೇ ವ್ಯಕ್ತಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ತಪ್ಪು ನಿರೂಪಣೆ, ಬಲ, ಅನಗತ್ಯ ಪ್ರಭಾವ, ಬಲಾತ್ಕಾರ, ಆಮಿಷ ಒಡ್ಡುವಿಕೆ ಅಥವಾ ಯಾವುದೇ ಮೋಸದ ವಿಧಾನದಿಂದ ಮತಾಂತರ ಮಾಡಬಾರದು. ಮದುವೆಯ ಮೂಲಕ ಯಾವುದೇ ವ್ಯಕ್ತಿ ಅಂತಹ ಮತಾಂತರಕ್ಕೆ ಕುಮ್ಮಕ್ಕು ನೀಡಬಾರದು ಅಥವಾ ಪಿತೂರಿ ಮಾಡಬಾರದು.
ಈ ಸುಗ್ರೀವಾಜ್ಞೆಯನ್ನು ಈ ವರ್ಷ ಕಾಯಿದೆಯಾಗಿ ಅಂಗೀಕರಿಸಲಾಯಿತು. ಇದರ ಪ್ರಕಾರ ಅಪರಾಧ ದ ತೀವ್ರತೆಯನ್ನು ಅವಲಂಬಿಸಿ ತಪ್ಪಿತಸ್ಥರಿಗೆ 10 ವರ್ಷ ಜೈಲು, 15,000 ರೂ ರಿಂದ 50,000 ರೂ ದಂಡ ವಿಧಿಸಬಹುದು. ವಿವಾಹವಾಗಲು ಬಯಸುವ ಅಂತರ್‌ಧರ್ಮೀಯ ಜೋಡಿಗಳು ಎರಡು ತಿಂಗಳ ಮುಂಚಿತವಾಗಿ ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕಾಗಿರುತ್ತದೆ.