ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಕೇವಲ ಕೆಲವು ದಿನಗಳಲ್ಲಿ ಆರಂಭವಾಗಲಿದ್ದು, ಮಾರ್ಚ್ 22 ರಿಂದ ಟೂರ್ನಿಯ 18ನೇ ಆವೃತ್ತಿ ಕಣಕ್ಕಿಳಿಯಲಿದೆ. ಆದರೆ, ಲಕ್ನೋ ಸೂಪರ್ ಜೈಂಟ್ಸ್ (Lucknow Super Giants-LSG) ತಂಡಕ್ಕೆ ಟೂರ್ನಿ ಆರಂಭಕ್ಕೂ ಮುನ್ನವೇ ಹಿನ್ನಡೆಯಾಗಿದೆ. ತಂಡದ ಪ್ರಮುಖ ವೇಗಿ ಮಯಾಂಕ್ ಯಾದವ್ (Mayank Yadav) ಗಾಯದ ಸಮಸ್ಯೆಯಿಂದ ಐಪಿಎಲ್ ಆರಂಭಿಕ ಪಂದ್ಯಗಳಿಂದ ದೂರ ಉಳಿಯುತ್ತಿದ್ದಾರೆ.
ಎಲ್ಎಸ್ಜಿ ತಂಡ ತನ್ನ ವೇಗದ ಬೌಲರ್ ಮಯಾಂಕ್ ಯಾದವ್ ಅವರನ್ನು 11 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಆದರೆ ಬೆನ್ನು ನೋವಿನ ಸಮಸ್ಯೆಯಿಂದ ಅವರು ಇದೀಗ ಐಪಿಎಲ್ ಆರಂಭಿಕ ಹಂತದಲ್ಲಿ ಲಭ್ಯರಿರುವುದಿಲ್ಲ. ಇಎಸ್ಪಿಎನ್ ಕ್ರಿಕ್‌ಇನ್ಫೋ ವರದಿ ಪ್ರಕಾರ, ಮಯಾಂಕ್ ಈಗ ಬೆಂಗಳೂರು ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪುನಶ್ಚೇತನ ಪ್ರಕ್ರಿಯೆಯಲ್ಲಿದ್ದಾರೆ ಮತ್ತು ಈಗಾಗಲೇ ಮೃದುವಾಗಿ ಬೌಲಿಂಗ್ ಮಾಡಲಾರಂಭಿಸಿದ್ದಾರೆ.
ಕಳೆದ ವರ್ಷ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮಯಾಂಕ್, ಆ ವೇಳೆಯಲ್ಲಿಯೇ ಗಾಯದಿಂದ ಹೊರನಡೆದಿದ್ದರು. ಅವರು ಈ ಬಾರಿ ಮೊದಲ ಚರಣವನ್ನು ತಪ್ಪಿಸಿಕೊಂಡರೂ, ದ್ವಿತೀಯ ಚರಣದಲ್ಲಿ ಆಡಲು ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಆದರೆ ಬಿಸಿಸಿಐ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಎಡ ಬೆನ್ನಿನ ಕೆಳಭಾಗದಲ್ಲಿ ಗಾಯ ಕಾಣಿಸಿಕೊಂಡಿರುವುದರಿಂದ ಅವರ ಪುನಾರಾಗಮನ ವಿಳಂಬವಾಗಬಹುದು.
ಕಳೆದ ಐಪಿಎಲ್ ಅವೃತ್ತಿಯಲ್ಲಿ ಮಯಾಂಕ್ ನಾಲ್ಕು ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿ ಗಮನಸೆಳೆದಿದ್ದರು. ಭಾರತ ಪರ ಅವರು ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3 ಪಂದ್ಯಗಳನ್ನಾಡಿ 4 ವಿಕೆಟ್ ಕಬಳಿಸಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಆಡಲಿದೆ.