Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮಹಾ ಶಿವರಾತ್ರಿ (Maha Shivarathri) ಪ್ರಯುಕ್ತ ಬುಧವಾರ ಶಿವನ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿಶೇಷ ಪೂಜಾ ಕಾರ್ಯಗಳು ನಡೆದವು. ಶಿವರಾತ್ರಿ ಉಪವಾಸ ನಿರತ ಭಕ್ತರು ದೇವಸ್ಥಾನಗಳಿಗೆ ತೆರಳಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದ ಭೋಗ ನಂದೀಶ್ವರ, ನಂದಿ ಗಿರಿಧಾಮದ ಯೋಗ ನಂದೀಶ್ವರ, ಅಗಲಗುರ್ಕಿಯ ಈಶಾ ಯೋಗ ಕೇಂದ್ರ, ಎಂ.ಜಿ.ರಸ್ತೆಯ ಮರಳು ಸಿದ್ದೇಶ್ವರ, ಪಾಪಾಗ್ನಿ ಮಠ, ಕೃಷ್ಣ ಚಿತ್ರಮಂದಿರ ರಸ್ತೆಯ ಪ್ರಸನ್ನೇಶ್ವರ ದೇವಸ್ಥಾನ, ಭುವನೇಶ್ವರಿ ವೃತ್ತದ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು.
ಚಿಂತಾಮಣಿ :

ಚಿಂತಾಮಣಿ ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರ ಕೈವಾರದ ಭೀಮಲಿಂಗೇಶ್ವರ ಸ್ವಾಮಿ, ಮಹಾಕೈಲಾಸಗಿರಿ, ಮುಕ್ತೀಶ್ವರಸ್ವಾಮಿ ದೇವಾಲಯ, ನಗರದ ಅಜಾದ್ ಚೌಕದ ಹರಿಹರೇಶ್ವರಸ್ವಾಮಿ ದೇವಾಲಯ, ನಾರಸಿಂಹಪೇಟೆಯ ವೀರಾಂಜನೇಯಸ್ವಾಮಿ ಮತ್ತು ಪಾರ್ವತಿ ಸಮೇತ ಸುಂದರೇಶ್ವರಸ್ವಾಮಿ ದೇವಾಲಯ, ಎನ್.ಎನ್.ಟಿ ರಸ್ತೆಯಲ್ಲಿರುವ ನಾಗನಾಥೇಶ್ವರಸ್ವಾಮಿ ದೇವಾಲಯಗಳಲ್ಲಿ ಶಿವರಾತ್ರಿ ಪ್ರಯುಕ್ತ ಭಕ್ತರು ದೇವರ ದರ್ಶನ ಪಡೆದರು.
ಶಿಡ್ಲಘಟ್ಟ :
ಅಶೋಕ ರಸ್ತೆಯಲ್ಲಿರುವ ಕೋಟೆ ಸೋಮೇಶ್ವರ, ಪೇಟೆ ನಗರೇಶ್ವರ, ಕಾಶಿ ವಿಶ್ವನಾಥೇಶ್ವರ, ಅಗ್ರಹಾರ ಬೀದಿಯ ಜಲಕಂಠೇಶ್ವರ ಮತ್ತು ಏಕಾಂಬರೇಶ್ವರ, ವೀರಾಪುರದ ಗವಿಗಂಗಾಧರೇಶ್ವರ ಮತ್ತು ಬೂದಾಳದ ಮಲೆಮಲ್ಲೇಶ್ವರ ದೇವಾಲಯಗಳಿಗೆ ಭಕ್ತರ ದಂಡೇ ಹರಿದು ಬಂದಿತ್ತು.
ಬಾಗೇಪಲ್ಲಿ :
ಶಿವರಾತ್ರಿ ಹಬ್ಬದ ಪ್ರಯುಕ್ತ ಬಾಗೇಪಲ್ಲಿ ತಾಲ್ಲೂಕಿನ ಐತಿಹಾಸಿಕ ಜಡಲಭೈರವೇಶ್ವರ, ಪರಗೋಡು ಲಿಂಗ ದೇವರು, ಹಿರಣ್ಯೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಿಗೆ ಭಕ್ತರು ಭೇಟಿ ನೀಡಿದರು.
ಗುಡಿಬಂಡೆ :
ಗುಡಿಬಂಡೆ ಪಟ್ಟಣದ ರಾಮಲಿಂಗೇಶ್ವರ, ಹಾಗೂ ಚಂದ್ರಮೌಳೇಶ್ವರ, ವೈದ್ಯನಾಥೇಶ್ವರ, ತಾಲ್ಲೂಕಿನ ಸೋಮೇನಹಳ್ಳಿ, ಜಂಗಾಲಹಳ್ಳಿ, ಬೀಚಗಾನಹಳ್ಳಿ ಚಂದ್ರಮೌಳೇಶ್ವರ, ದಿನ್ನಹಳ್ಳಿಯ ಪಾತಳೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ಚೇಳೂರು :
ಶಿವರಾತ್ರಿ ಅಂಗವಾಗಿ ಇಲ್ಲಿನ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ಬುಧವಾರ ಮುಂಜಾನೆಯಿಂದಲೇ ಧಾರ್ಮಿಕ ಪೂಜಾ ಕೈಂಕಾರ್ಯ ಆರಂಭವಾಗಿದ್ದವು. ಗಂಗಾಜಲ ಅಭಿಷೇಕ, ಫಲಪಂಚಾಮೃತಾಭಿಷೇಕ, ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಗಳು ನೆರವೇರಿದವು.
ಗೌರಿಬಿದನೂರು :
ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದ ಕುಮಾರ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ನವರತ್ನ ಅಲಂಕಾರ ಮತ್ತು ಪೂಜಾ ಕಾರ್ಯಗಳು ನಡೆದವು.
For Daily Updates WhatsApp ‘HI’ to 7406303366
The post ಜಿಲ್ಲೆಯಾದ್ಯಂತ ಶಿವನಾಮ ಸ್ಮರಣೆ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.