ಉತ್ತರ ಪ್ರದೇಶದ ಪ್ರಯಾಗ್ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವು (Mahakumbh Mela) ಕೇವಲ ಸನಾತನ ಸಂಸ್ಕೃತಿಯ ಜಾತ್ರೆಯಷ್ಟೇ ಅಲ್ಲ, ಇದು ಭಕ್ತರ ವಿಶಿಷ್ಟ ಸಂಗಮ ಮತ್ತು ಸಂಕಲ್ಪದ ಮಹಾ ಹಬ್ಬ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘಟ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ.
ಸಮಾಜದಲ್ಲಿ ಒಗ್ಗಟ್ಟಿನ ಶಕ್ತಿ, ಸಂತ ಸಮುದಾಯ ಹಾಗೂ ಸರ್ಕಾರದ ಸಂಘಟಿತ ಪಾತ್ರದಿಂದ ಮಾತ್ರ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಸಾಧ್ಯ ಎಂದು ಅವರು ಹೇಳಿದರು. ದತ್ತಾತ್ರೇಯ ಅವರು ಸೋಮವಾರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ ಹಾಗೂ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಪ್ರಸ್ತುತ ಕಾಲದಲ್ಲಿ ಹೊಸ ಪೀಳಿಗೆಯನ್ನು ಸನಾತನ ಧರ್ಮ, ಸಂಸ್ಕೃತಿ ಮತ್ತು ಅದರ ಮೌಲ್ಯಗಳೊಂದಿಗೆ ಸಂಪರ್ಕಿಸುವುದು ಮುಖ್ಯವಾಗಿದೆ. ಈ ಕಾರಣಕ್ಕಾಗಿ ಕುಟುಂಬ, ಸಮಾಜ ಮತ್ತು ಧಾರ್ಮಿಕ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಯುವಜನರಿಗೆ ಧರ್ಮ ಮತ್ತು ಸಂಸ್ಕೃತಿಯ ಮಹತ್ವದ ಬಗ್ಗೆ ಅರಿವು ಮೂಡಿಸುವಂತೆ ಅವರು ಸಂತ ಸಮುದಾಯ ಮತ್ತು ಸಾಮಾಜಿಕ ನಾಯಕತ್ವಕ್ಕೆ ಮನವಿ ಮಾಡಿದರು.
ಮಹಾಕುಂಭ ಮೇಳದಲ್ಲಿ ಭಕ್ತರ ಪ್ರವಾಹ ನಿರಂತರವಾಗಿ ಹರಿದು ಬರುತ್ತಿದೆ. ಗಂಗಾ, ಯಮುನಾ ಮತ್ತು ಅದೃಶ್ಯ ಸರಸ್ವತಿಯ ಪವಿತ್ರ ಸಂಗಮದಲ್ಲಿ ಸ್ನಾನ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮಹಾಕುಂಭ ಮುಗಿಯಲು ಇನ್ನೂ 17 ದಿನಗಳು ಬಾಕಿ ಇವೆ, ಆದರೆ ಈ ಬಾರಿ ಸ್ನಾನ ಮಾಡುವವರ ಸಂಖ್ಯೆ 50 ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಶುಕ್ರವಾರವೇ ಈ ಸಂಖ್ಯೆ 40 ಕೋಟಿ ದಾಟಿತ್ತು.
ಮೂರು ಪ್ರಮುಖ ಅಮೃತ ಸ್ನಾನಗಳಾದ ಮಕರ ಸಂಕ್ರಾಂತಿ, ಮೌನಿ ಅಮಾವಾಸ್ಯೆ ಮತ್ತು ವಸಂತ ಪಂಚಮಿ ಪೂರ್ಣಗೊಂಡಿವೆ. ಇಷ್ಟೆಲ್ಲಾ ಆದರೂ ಭಕ್ತರ ಉತ್ಸಾಹ ಕಡಿಮೆಯಾಗಿಲ್ಲ. ಪ್ರತಿದಿನ ದೇಶ ಮತ್ತು ವಿದೇಶಗಳಿಂದ ಲಕ್ಷಾಂತರ ಜನರು ಪವಿತ್ರ ಸ್ನಾನ ಮಾಡಲು ಸಂಗಮಕ್ಕೆ ತಲುಪುತ್ತಿದ್ದಾರೆ. ಹೆಚ್ಚುತ್ತಿರುವ ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ರೈಲ್ವೆ ಮತ್ತು ಸಾರಿಗೆ ಇಲಾಖೆ ಹೆಚ್ಚುವರಿ ರೈಲುಗಳು ಮತ್ತು ಬಸ್ಸುಗಳನ್ನು ಓಡಿಸುವ ಅಗತ್ಯವಿದೆ.