Jalandhar: ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ (marathon) ಓಟಗಾರ ಫೌಜಾ ಸಿಂಗ್ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ 114 ವರ್ಷ ವಯಸ್ಸಾಗಿತ್ತು. ಜಲಂಧರ್‌ನ ತಮ್ಮ ಮನೆ ಹೊರಗೆ ಸಂಜೆ ನಡೆಯುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗಳಾಗಿ, ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.
ಫೌಜಾ ಸಿಂಗ್ ಅವರು 2000ನೇ ಇಸವಿಯಲ್ಲಿ ಮ್ಯಾರಥಾನ್ ಓಟ ಆರಂಭಿಸಿದರು. ಇತ್ತೀಚೆಗೆ ಟೊರಂಟೊ ಮತ್ತು ಲಂಡನ್ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿ ಜನಪ್ರಿಯರಾದರು. 2013ರಲ್ಲಿ 101ನೇ ವಯಸ್ಸಿನಲ್ಲಿ ಹಾಂಗ್ ಕಾಂಗ್ ಮ್ಯಾರಥಾನ್ ಓಟದಲ್ಲಿಯೇ ತಮ್ಮ ಕೊನೆಯ ವೃತ್ತಿಪರ ಓಟ ನಡೆಸಿದರು.
ತಮ್ಮ ಪತ್ನಿ ಮತ್ತು ಮಗನನ್ನು 89ನೇ ವಯಸ್ಸಿನಲ್ಲಿ ಅಪಘಾತದಲ್ಲಿ ಕಳೆದುಕೊಂಡ ಬಳಿಕ ಅವರು ಖಿನ್ನತೆಯಿಂದ ಹೊರಬಂದು ಮ್ಯಾರಥಾನ್ ಓಟ ಆರಂಭಿಸಿದರು. ತಮ್ಮ ಪರಿಶ್ರಮ ಮತ್ತು ಧೈರ್ಯದಿಂದ ಅನೇಕ ಜನರಿಗೆ ಸ್ಫೂರ್ತಿ ನೀಡಿದರು.
ಪೋಲೀಸರ ಪ್ರಕಾರ, ಡಿಕ್ಕಿ ಹೊಡೆದ ಕಾರು ಇನ್ನೂ ಪತ್ತೆಯಾಗಿಲ್ಲ ಹಾಗೂ ತನಿಖೆ ನಡೆಯುತ್ತಿದೆ. ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರು ಫೌಜಾ ಸಿಂಗ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.