ಅಮೆರಿಕದ ಅಲಾಸ್ಕಾ (Alaska) ರಾಜ್ಯದಲ್ಲಿ ಭಾರಿ ಭೂಕಂಪ (earthquake) ಸಂಭವಿಸಿದೆ. ಭೂಕಂಪದ ತೀವ್ರತೆ 6.2 ಆಗಿದ್ದು, ಭೂಮಿಯ 48 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.
ಜುಲೈ 17ರಂದು ಅಲಾಸ್ಕಾದಲ್ಲಿ 7.3 ತೀವ್ರತೆಯ ಮತ್ತೊಂದು ಬೃಹತ್ ಭೂಕಂಪನವೂ ಸಂಭವಿಸಿತ್ತು. ಅದು 36 ಕಿಮೀ ಆಳದಲ್ಲಿ ಸಂಭವಿಸಿ, ಇನ್ನೂ ಹೆಚ್ಚಿನ ಆಘಾತಗಳನ್ನುಂಟುಮಾಡಿದೆ ಎಂದು ಎನ್‌ಸಿಎಸ್ ಹೇಳಿದೆ.
ಗಭೀರವಾಗಿ ಅಲ್ಲದ ಆಳದಲ್ಲಿ ಸಂಭವಿಸುವ ಭೂಕಂಪಗಳು ಹೆಚ್ಚು ಅಪಾಯಕಾರಿಯಾಗುತ್ತವೆ. ಏಕೆಂದರೆ ಕಂಪನದ ಅಲೆಗಳು ತ್ವರಿತವಾಗಿ ಮೇಲ್ಮೈ ತಲುಪುತ್ತವೆ. ಇದು ಕಟ್ಟಡಗಳು ಮತ್ತು ಜನೆಜೀವನಕ್ಕೆ ಹೆಚ್ಚು ಹಾನಿ ಉಂಟುಮಾಡಬಹುದು.
ಭೂಕಂಪದ ಬಳಿಕ ಅಲಾಸ್ಕಾದ ಕರಾವಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಜನರು ಕಡಲ ತೀರದಿಂದ ದೂರವಿರಬೇಕು, ಎತ್ತರದ ಅಥವಾ ಒಳನಾಡಿನ ಪ್ರದೇಶಗಳಿಗೆ ಹೋಗಬೇಕು ಎಂಬ ಸೂಚನೆಗಳನ್ನು ಅಧಿಕಾರಿಗಳು ನೀಡಿದ್ದಾರೆ.
ಅಲಾಸ್ಕಾ ಪ್ರದೇಶದಲ್ಲಿ ಜಗತ್ತಿನ ಅತ್ಯಂತ ಸಕ್ರಿಯ ಭೂಕಂಪನ ಪ್ರದೇಶವಿದೆ. ಇಲ್ಲಿ 130 ಕ್ಕೂ ಹೆಚ್ಚು ಜ್ವಾಲಾಮುಖಿಗಳು ಇದ್ದು, ಕಳೆದ 200 ವರ್ಷಗಳಲ್ಲಿ ಅಮೆರಿಕದಲ್ಲಿ ಸಂಭವಿಸಿದ ಬಹುತೇಕ ಜ್ವಾಲಾಮುಖಿ ಸ್ಫೋಟಗಳು ಇದೇ ಭಾಗದಲ್ಲಿ ನಡೆದಿವೆ.