MALE (Maldives): Maldives ಸರ್ಕಾರ ಇಸ್ರೇಲ್ (Israel) ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ತಮ್ಮ ದೇಶಕ್ಕೆ ಪ್ರವೇಶಿಸದಂತೆ ನಿಷೇಧ ವಿಧಿಸಿದೆ. ವಲಸೆ ಕಾಯ್ದೆಗೆ ತಿದ್ದುಪಡಿ ಮಾಡಿ ಈ ನಿಷೇಧವನ್ನು ಜಾರಿಗೆ ತಂದಿದ್ದು, ಅದಕ್ಕೆ ರಾಷ್ಟ್ರಪತಿ ಮೊಹಮ್ಮದ್ ಮುಯಿಝು (President Mohammed Muizu) ಮಂಗಳವಾರ ಅಧಿಕೃತ ಅನುಮೋದನೆ ನೀಡಿದ್ದಾರೆ.
ಈ ತಿದ್ದುಪಡಿ 2025ರ ಏಪ್ರಿಲ್ 15 ರಂದು ನಡೆದ ಪೀಪಲ್ಸ್ ಮಜ್ಲಿಸ್ ಅಧಿವೇಶನದಲ್ಲಿ ಅಂಗೀಕಾರವಾದ ಬಳಿಕ, ಅದನ್ನು ಅಧ್ಯಕ್ಷರು ಅನುಮೋದಿಸಿದರು. ಹೊಸ ನಿಯಮದ ಪ್ರಕಾರ ಇಸ್ರೇಲ್ ಪಾಸ್‌ಪೋರ್ಟ್ ಹೊಂದಿರುವ ಯಾವುದೇ ವ್ಯಕ್ತಿಯು ಮಾಲ್ಡೀವ್ಸ್ ಭೂಭಾಗಕ್ಕೆ ಪ್ರವೇಶಿಸಬಹುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಪ್ಯಾಲೆಸ್ಟೈನಿನ ಮೇಲಿನ ಇಸ್ರೇಲ್ ಮಿಲಿಟರಿ ದಾಳಿಗಳ ವಿರುದ್ಧ ವಿರೋಧ ವ್ಯಕ್ತಪಡಿಸುವ ಉದ್ದೇಶದಿಂದ ಮತ್ತು ಪ್ಯಾಲೆಸ್ಟೈನ್ ಜನತೆಗೆ ಬೆಂಬಲ ನೀಡಲು ಮಾಲ್ಡೀವ್ಸ್ ಈ ತೀರ್ಮಾನ ಕೈಗೊಂಡಿದೆ.
ಇದಕ್ಕೂ ಮುಂದಾಗಿ, ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಅವರು ಪ್ಯಾಲೆಸ್ಟೈನ್ ದೇಶವನ್ನು 1967 ರ ಗಡಿಗಳ ಆಧಾರದ ಮೇಲೆ ಪೂರ್ವ ಜೆರುಸಲೇಮ್ ನ್ನು ರಾಜಧಾನಿಯಾಗಿ ಘೋಷಿಸಿ ಸ್ಥಾಪಿಸಬೇಕೆಂಬ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ. ಮಾಲ್ಡೀವ್ಸ್ ಅಂತರರಾಷ್ಟ್ರೀಯ ಕಾನೂನುಗಳನ್ನೂ ಗೌರವಿಸುತ್ತಿದ್ದು, ಇಸ್ರೇಲ್ ಕ್ರಮಗಳನ್ನು ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಖಂಡಿಸುತ್ತಿದೆ.