ಪಶ್ಚಿಮ ಬಂಗಾಳ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) 2030ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವದರ ಕುರಿತು ಅನುಮಾನ ವ್ಯಕ್ತಪಡಿಸಿರುವುದು ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಗೆ BJP ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದ (Oxford University) ಕೆಲ್ಲಾಗ್ ಕಾಲೇಜಿನಲ್ಲಿ ಮಾತನಾಡಿದ ಮಮತಾ, “ಭಾರತವು ಈಗಾಗಲೇ ಯುಕೆಯನ್ನು ಹಿಂದಿಕ್ಕಿದೆ. ಶೀಘ್ರದಲ್ಲೇ ಇದು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಆದರೆ ನಾನು ಈ ನಿರ್ಧಾರವನ್ನು ಒಪ್ಪುವುದಿಲ್ಲ” ಎಂದು ಹೇಳಿದ್ದಾರೆ. ಜಾಗತಿಕ ಅನಿಶ್ಚಿತತೆಗಳನ್ನು ಉಲ್ಲೇಖಿಸಿ, 2030ರ ವೇಳೆಗೆ ಭಾರತ ಜಾಗತಿಕ ಆರ್ಥಿಕ ಶಕ್ತಿಯಾಗಿ ಬೆಳೆಯುವ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಮಮತಾ ಅವರ ಈ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ವಿದೇಶಿ ನೆಲದಲ್ಲಿ ಭಾರತವನ್ನು ಅಪಮಾನಿಸುವ ಕೃತ್ಯ ಎಂದು ಟೀಕಿಸಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತು ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರೂ ಕೂಡ ಈ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಮಮತಾ ಅವರ ಭಾಷಣದ ವೇಳೆ, ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆಗಳು ನಡೆದವು. SFI-UK ಸದಸ್ಯರು ಬಂಗಾಳದ ಹಿಂಸಾಚಾರ ಮತ್ತು ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿ, “ಗೋ ಬ್ಯಾಕ್” ಘೋಷಣೆ ಕೂಗಿದರು. ಇದಕ್ಕೆ ತಿರುಗೇಟು ನೀಡಿದ ಮಮತಾ, “ನೀವು ನನಗೆ ಮಾತನಾಡಲು ಅವಕಾಶ ನೀಡಬೇಕು. ನೀವು ನಿಮ್ಮ ಸಂಸ್ಥೆಗೆ ಅಪಮಾನ ಮಾಡುತ್ತಿದ್ದೀರಿ” ಎಂದು ಪ್ರತಿಕ್ರಿಯಿಸಿದರು.
ಮಮತಾ ಬ್ಯಾನರ್ಜಿ ಅವರ ಈ ಹೇಳಿಕೆ ಭಾರತದ ಆರ್ಥಿಕ ಭವಿಷ್ಯದ ಬಗ್ಗೆ ಚರ್ಚೆಗಿಂತ ರಾಜಕೀಯ ದೋಷಾರೋಪಗಳಿಗೆ ಕಾರಣವಾಯಿತು. ಅವರ ಮಾತುಗಳನ್ನು ಬಿಜೆಪಿ ಭಾರತದ ವಿರುದ್ಧದ ನಿಲುವು ಎಂದು ವ್ಯಾಖ್ಯಾನಿಸಿದರೆ, ತಾವು ಜಾಗತಿಕ ಪರಿಸ್ಥಿತಿಯ ಬಗ್ಗೆ ವಾಸ್ತವಿಕವಾಗಿ ಮಾತನಾಡಿದ್ದೇನೆ ಎಂದು ಮಮತಾ ಸ್ಪಷ್ಟಪಡಿಸಿದರು.