ಮಂಗಳೂರು (Mangalore) ನಗರಾಭಿವೃದ್ಧಿ ಪ್ರಾಧಿಕಾರ (MUDA) ದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿದ್ದು, ದಲ್ಲಾಳಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ಕಮಿಷನರ್ ನೂರ್ ಝಹರಾ ಖಾನಂ ಅವರಿಗೆ ವಾಮಾಚಾರದ ಬೆದರಿಕೆ ಒಡ್ಡಲಾಗಿದೆ.
ಮುಡಾ ಕಚೇರಿಗೆ ದಲ್ಲಾಳಿಗಳನ್ನು ನಿಷೇಧಿಸಿದ್ದಕ್ಕೆ ಪ್ರತಿಯಾಗಿ, ಕಮಿಷನರ್‌ಗೆ ಬೆದರಿಕೆ ಕರೆಗಳು ಮತ್ತು ಸಂದೇಶಗಳು ಬಂದಿವೆ. ಈ ಬಗ್ಗೆ ಅವರು ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬ್ರೋಕರ್ ವಹಾಬ್ (45) ಮತ್ತು ಅಸಿಸ್ಟೆಂಟ್ ಬ್ರೋಕರ್ ಸಾಬಿತ್ (25) ವಿರುದ್ಧ ಎಫ್ಐಆರ್ ದಾಖಲಾಗಿದೆ. ಮೌಢ್ಯ ನಿರ್ಬಂಧ ಕಾಯ್ದೆ 2020 ಹಾಗೂ ಐಪಿಸಿ ಸೆಕ್ಷನ್ 132, 351, 356(1), 61(2), 352 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಾಟ್ಸಾಪ್ ಗ್ರೂಪ್ ಮೂಲಕ ಹಾಗೂ ದೂರವಾಣಿ ಕರೆಗಳ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ದಲ್ಲಾಳಿಗಳು ಕಚೇರಿಯಲ್ಲಿ ನಿಯಮ ಉಲ್ಲಂಘಿಸಿ ಹಾವಳಿ ಮಾಡುತ್ತಿದ್ದರೆಂಬ ಆರೋಪಗಳೂ ಕೇಳಿಬಂದಿವೆ.
ಮುಡಾ ಕಚೇರಿಯಲ್ಲಿ ಅಧಿಕಾರಿಗಳಿಲ್ಲದ ವೇಳೆ ದಲ್ಲಾಳಿಗಳೇ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವಿತ್ತು. ಕಚೇರಿಯ ಸಿಸಿಟಿವಿಯಲ್ಲಿ ಬ್ರೋಕರ್ ಕಡತ ತಿದ್ದುಪಡಿ ಮಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಅದು ವೈರಲ್ ಕೂಡ ಆಯಿತು.
ವಿಡಿಯೋ ವೈರಲ್ ಆದ ನಂತರ, ಕಮಿಷನರ್ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ದಲ್ಲಾಳಿಗಳ ಪ್ರವೇಶವನ್ನು ನಿರ್ಬಂಧಿಸಿದರು. ಈ ನಿರ್ಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ದಲ್ಲಾಳಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಮುಡಾ ಕಚೇರಿಯಲ್ಲಿ ರಾಜಕೀಯ ನಾಯಕರ ಹೆಸರಿನಲ್ಲಿ ದಲ್ಲಾಳಿಗಳ ಪಾರುಪತ್ಯ ನಡೆಯುತ್ತಿರುವ ಆರೋಪಗಳೂ ಹಿಂದಿನಿಂದಲೇ ಕೇಳಿಬಂದಿವೆ.