California:ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ (Los Angeles) ಕಾಡ್ಗಿಚ್ಚು ಉಂಟಾಗಿ 30,000 ಜನರನ್ನು ಸ್ಥಳಾಂತರ ಮಾಡಲಾಗಿದೆ. ಪ್ಯಾಸಿಫಿಕ್ ಪ್ಯಾಲಿಸೇಡ್ಸ್ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಪ್ರಾರಂಭದಲ್ಲಿ 20 ಎಕರೆ ಪ್ರದೇಶದಲ್ಲಿ ಇದ್ದರೂ, ಕೆಲವೇ ಗಂಟೆಗಳಲ್ಲಿ 1,200 ಎಕರೆ ವ್ಯಾಪಿಸಿದೆ.
ಈ ಕಾಡ್ಗಿಚ್ಚಿನ ಪರಿಣಾಮವಾಗಿ 13,000 ಕ್ಕೂ ಹೆಚ್ಚು ಕಟ್ಟಡಗಳು ಮತ್ತು 10,000 ಮನೆಗಳು ಅಪಾಯಕ್ಕೆ ಒಳಗಾಗಿವೆ. 250ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ, ಅಗ್ನಿಶಾಮಕ ವಾಹನಗಳು ಮತ್ತು ಹೆಲಿಕಾಪ್ಟರ್‌ಗಳು ಬೆಂಕಿ ನಂದಿಸಲು ಕೆಲಸ ಮಾಡುತ್ತಿದ್ದರೂ, ಗಾಳಿಯ ಪ್ರಭಾವದಿಂದ ಕಾರ್ಯವನ್ನು ಸವಾಲಿನ ಹಾಗೆ ಮಾಡಿದೆ.
ಲಾಸ್ ಏಂಜಲೀಸ್ ಅಗ್ನಿಶಾಮಕ ಮುಖ್ಯಸ್ಥ ಕ್ರಿಸ್ಟಿನ್ ಕ್ರೌಲಿ ಅವರು “ಸದ್ಯಕ್ಕೆ ಯಾವುದೇ ಗಾಯಗಳ ವರದಿ ಬಂದಿಲ್ಲ” ಎಂದು ತಿಳಿಸಿದ್ದಾರೆ. ಬೆಂಕಿ ನಂದಿಸಲು ಗಾಳಿಯ ವೇಗ ಮತ್ತು ಪರ್ವತ ಪ್ರದೇಶದ ಸವಾಲುಗಳು ಅಡ್ಡಿಯಾಗಿವೆ.
ಲಾಸ್ ಏಂಜಲೀಸ್ ಕೌಂಟಿಯ ಮೇಲ್ವಿಚಾರಕಿ ಲಿಂಡ್ಸೆ ಹೊರ್ವತ್ ಅವರು, “ಶಾಲೆಗಳನ್ನು ಸ್ಥಳಾಂತರಿಸಲಾಗುತ್ತಿದೆ. ಬೆಂಕಿಯನ್ನು ನಿಯಂತ್ರಿಸಲು ಪ್ರತಿ ಸಂಪನ್ಮೂಲ ಬಳಸಲಾಗುತ್ತಿದೆ” ಎಂದರು. ಸಿಟಿ ಕೌನ್ಸಿಲ್ ಅಧ್ಯಕ್ಷ ಮಾರ್ಕ್ವಿಸ್ ಹ್ಯಾರಿಸ್-ಡಾಸನ್, “ಈ ಭೀಕರ ಕಾಡ್ಗಿಚ್ಚಿಗೆ ನಗರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ” ಎಂದು ತಿಳಿಸಿದರು.
ಗಂಟೆಗೆ 160 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಬೆಂಕಿ ಇನ್ನೂ ವ್ಯಾಪಿಸಬಹುದಾಗಿದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ. ಜನರ ಸುರಕ್ಷತೆಯನ್ನು ಖಚಿತಪಡಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.