Bengaluru: ಬೆಂಗಳೂರು ಮತ್ತು ಕರ್ನಾಟಕದಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ (Medicine shortage) ಮುಂದುವರಿದಿದೆ. 250ಕ್ಕೂ ಹೆಚ್ಚು ಔಷಧಿಗಳು ಲಭ್ಯವಿಲ್ಲದೆ ರೋಗಿಗಳಿಗೆ ದೊಡ್ಡ ತೊಂದರೆಯಾಗಿದೆ.
ಆರೋಗ್ಯ ಇಲಾಖೆಯು (health department) ಔಷಧಿಗಳ ಖರೀದಿಗಾಗಿ ಹಣ ಬಿಡುಗಡೆ ಮಾಡಿದ್ದರೂ ಸಮಸ್ಯೆ ಇನ್ನೂ ಬಗೆಹರಿಯದೇ ಇದೆ. ಇತ್ತೀಚೆಗೆ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಬಗ್ಗೆ ಮಾಹಿತಿ ಬಂದಿದ್ದು, ಹೀಗಾಗಿ ಆಸ್ಪತ್ರೆ ಸಿಬ್ಬಂದಿಗಳು ಹೊರಗಡೆ ಚೀಟಿ ಬರೆದು ಕೊಡುತ್ತಿದ್ದು, ರೋಗಿಗಳು ಹಣ ಕೊಟ್ಟು ಹೊರಗೆ ಔಷಧಿ ಖರೀದಿ ಮಾಡುತ್ತಿದ್ದಾರೆ.
ಈ ಸಂಬಂಧ ಹಲವು ನಗರಗಳ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಸಮಸ್ಯೆ ಹೆಚ್ಚಾಗಿದೆ. ಬೆಂಗಳೂರು ನಗರದ ಕೆಸಿ ಜನರಲ್, ವಿಕ್ಟೋರಿಯಾ ಸೇರಿದಂತೆ ಅನೇಕ ಆಸ್ಪತ್ರೆಗಳಲ್ಲಿ ಬಿಪಿ, ಶುಗರ್, ಮತ್ತು ಇತರ ಔಷಧಿಗಳು ಲಭ್ಯವಿಲ್ಲ. ಆರೋಗ್ಯ ಇಲಾಖೆಯು ಔಷಧಿ ಖರೀದಿ ಮಾಡುವ ಪ್ರಕ್ರಿಯೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ ಎಂದು ಹೇಳಿದ್ದರೂ, ಸಮಸ್ಯೆ ಪರಿಹರಿಸಲಾಗಿಲ್ಲ.
ಕಳೆದ ಒಂದು ತಿಂಗಳಿಂದ ರೋಗಿಗಳಿಗೆ ಬೇಕಾದ ಬ್ಯಾಂಡೇಜ್ ಕ್ಲಾತ್, ಕಾಟನ್, ಸರ್ಜಿಕಲ್ ಗ್ಲೌಸ್, ಗ್ಲೂಕೋಸ್ ಬಾಟಲ್, ಆ್ಯಂಟಿಬಯೋಟಿಕ್ ಮಾತ್ರೆ, ಪ್ಯಾರಸೆಟೋಮೋಲ್, ಡಯಬಿಟಿಸ್, ಬಿಪಿ, ರಕ್ತಹೀನತೆ, ನ್ಯೂಮೋನಿಯಾ, ಅಸ್ತಮಾ ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಔಷಧಿಗಳು ಔಟ್‌ಆಫ್ ಸ್ಟಾಕ್ ಆಗಿದ್ದು, ಮೆಡಿಕಲ್‌ಗೆ ಹೋದ ರೋಗಿಗಳು ಹಾಗೂ ಸಂಬಂಧಿಕರು ಬರೀ ಕೈಯಲ್ಲಿ ಬರುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೆಲವು ಔಷಧಿಗಳನ್ನು ಖರೀದಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದಿದ್ದಾರೆ. ಯಾವುದೇ ತಾಂತ್ರಿಕ ವಿಳಂಬದಿಂದಾಗಿ ಔಷಧಿಗಳ ಕೊರತೆ ಉಂಟಾಗಿದೆಯಾದರೂ, ಸ್ಥಳೀಯ ಮಟ್ಟದಲ್ಲಿ ಔಷಧಿಗಳು ಖರೀದಿಸಲು ಸೂಚನೆ ನೀಡಲಾಗಿದೆ.