Bengaluru: ಇಬ್ಬರು ವಾಲ್ಮೀಕಿ ಸಮುದಾಯದವರನ್ನು ಸಂಪುಟದಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ, ಆ ಸಮುದಾಯದವರನ್ನೇ ಸಂಪುಟಕ್ಕೆ ಸೇರಿಸುವಂತೆ ಒತ್ತಾಯಿಸಲು ದೆಹಲಿಗೆ ಹೋಗುವುದಾಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ ನಂತರ, ಜಾರಕಿಹೊಳಿ ನೇತೃತ್ವದಲ್ಲಿ ಸಮುದಾಯದ ಶಾಸಕರು ಮತ್ತು ಕಾಂಗ್ರೆಸ್ ನಾಯಕರು ಸಭೆ ನಡೆಸಿದರು. ಸಭೆಯಲ್ಲಿ ಬಸವಂತಪ್ಪ, ಅನಿಲ್ ಚಿಕ್ಕಮಾಧು, ಬಿ.ಎಂ. ನಾಗರಾಜ್, ರಘಮೂರ್ತಿ, ಗಣೇಶ್ ಪ್ರಸಾದ್, ಹರೀಶ್ ಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಜಾರಕಿಹೊಳಿ ಹೇಳುವಂತೆ, “ರಾಜಣ್ಣಗೆ ಧೈರ್ಯ ಹೇಳಿದ್ದೇವೆ. ಅವರು ಬೇಸರಪಡಿಲ್ಲ. ದೆಹಲಿಗೆ ಹೋಗುತ್ತೇನೆ ಎಂದಿದ್ದಾರೆ. ಷಡ್ಯಂತ್ರದ ವಿಷಯವನ್ನು ಅವರು ಸಮಯ ಬಂದಾಗ ಹೇಳುತ್ತೇನೆ ಎಂದಿರುವುದು ಅವರ ವಿಷಯ. ಸಮುದಾಯದ ಹೋರಾಟ ಬೇರೆ, ಪಕ್ಷದ ವಿಚಾರ ಬೇರೆ” ಎಂದರು.
ತುಮಕೂರಿನಲ್ಲಿ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ತೆಗೆದುಹಾಕಿದ ನಿರ್ಧಾರವನ್ನು ಖಂಡಿಸಿ, ಅಭಿಮಾನಿಗಳು ಬೃಹತ್ ಮೆರವಣಿಗೆ ನಡೆಸಿದರು. ಎಂಜಿ ರಸ್ತೆಯ ಅಂಗಡಿಗಳು ಸ್ವಯಂಪ್ರೇರಿತವಾಗಿ ಬಾಗಿಲು ಮುಚ್ಚಿ ಬೆಂಬಲ ಸೂಚಿಸಿದವು. ಈ ವೇಳೆ ಪ್ರದೇಶದಲ್ಲಿ ಕೆಲಕಾಲ ಅಘೋಷಿತ ಬಂದ್ ಜಾರಿಯಾಯಿತು.
ಪ್ರತಿಭಟನೆ ವೇಳೆ, ರಾಜಣ್ಣ ಅವರ ಒಬ್ಬ ಬೆಂಬಲಿಗ ಅರೆಬೆತ್ತಲೆಯಾಗಿ ಉರುಳು ಹಾಕುತ್ತಾ “ನಮ್ಮ ನಾಯಕನನ್ನು ಮರಳಿ ಸಂಪುಟಕ್ಕೆ ಸೇರಿಸಿ” ಎಂದು ಘೋಷಣೆ ಕೂಗಿದರು. ಅವರ ಕೈಯಲ್ಲಿ ರಾಜಣ್ಣ ಅವರ ಭಾವಚಿತ್ರವೂ ಇತ್ತು.