Bengaluru: ಬೇಲೇಕೇರಿ ಅದಿರು ಅಕ್ರಮ ಸಾಗಾಟ ಪ್ರಕರಣದಲ್ಲಿ ಬಂಧಿತರಾಗಿದ್ದ ಕಾರವಾರ–ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗೆ ಅನಾರೋಗ್ಯದ ಕಾರಣದಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 7 ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಸತೀಶ್ ಸೈಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಸೆಪ್ಟೆಂಬರ್ 12ರವರೆಗೆ ಇ.ಡಿ. ವಶಕ್ಕೆ ಒಪ್ಪಿಸಿದ್ದರು. ಆದರೆ, ಸೈಲ್ ಅವರಿಗೆ ಉಸಿರಾಟದ ತೊಂದರೆ ಮತ್ತು ಮಧುಮೇಹ ಇರುವುದರಿಂದ ಅವರ ಪರ ವಕೀಲರು ಜಾಮೀನು ಕೋರಿ ಮನವಿ ಸಲ್ಲಿಸಿದ್ದರು. ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ಈ ಪ್ರಕರಣದಲ್ಲಿ ಹಿಂದೆಯೇ ವಿಶೇಷ ನ್ಯಾಯಾಲಯವು ಸತೀಶ್ ಸೈಲ್ ಅವರಿಗೆ ಏಳು ವರ್ಷದ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ಹೈಕೋರ್ಟ್ ಆ ಶಿಕ್ಷೆಯನ್ನು ಅಮಾನತಿನಲ್ಲಿಟ್ಟಿತ್ತು.
ಇತ್ತೀಚೆಗೆ ಇ.ಡಿ. ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆ ನಡೆಸಿ, ಆಗಸ್ಟ್ 13 ಮತ್ತು 14ರಂದು ಸೈಲ್ ಅವರ ಮನೆಗಳ ಮೇಲೆ ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ 13 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ಮತ್ತು ಇತರ ವಸ್ತುಗಳನ್ನು ಪತ್ತೆಹಚ್ಚಲಾಗಿದೆ ಎಂದು ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾದ ಸತೀಶ್ ಸೈಲ್ ಅವರನ್ನು ಇ.ಡಿ. ಅಧಿಕಾರಿಗಳು ಮಂಗಳವಾರ ರಾತ್ರಿ ಬಂಧಿಸಿ, ಬುಧವಾರ ಕೋರ್ಟ್‌ಗೆ ಹಾಜರುಪಡಿಸಿದ್ದರು. ಕೋರ್ಟ್ ಅವರು 7 ದಿನಗಳ ಕಾಲ ಮಧ್ಯಂತರ ಜಾಮೀನಿನಲ್ಲಿ ಇರಲು ಅವಕಾಶ ನೀಡಿದೆ.