Accra, Ghana: ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಘಾನಾದ ಅತ್ಯುನ್ನತ ರಾಷ್ಟ್ರೀಯ ಗೌರವವಾದ ‘ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ ಪ್ರಶಸ್ತಿ ನೀಡಲಾಗಿದೆ. ಈ ಗೌರವವನ್ನು ಘಾನಾದ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮ ಅವರಿಂದ ಮೋದಿಯವರು ಸ್ವೀಕರಿಸಿದರು.
ಘಾನಾ ಸರ್ಕಾರವು ಮೋದಿಯವರ ವಿಶಿಷ್ಟ ರಾಜಕೀಯ ಧೋರಣೆ ಮತ್ತು ಜಾಗತಿಕ ನಾಯಕತ್ವವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿದೆ. ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಮೋದಿ, “ಇದು ನನ್ನ ಹಾಗೂ ಭಾರತಕ್ಕಾಗಿ ಹೆಮ್ಮೆಯ ಕ್ಷಣ. ನಾನು ಈ ಪ್ರಶಸ್ತಿಯನ್ನು 140 ಕೋಟಿ ಭಾರತೀಯರ ಪರವಾಗಿ ವಿನಮ್ರವಾಗಿ ಸ್ವೀಕರಿಸುತ್ತೇನೆ” ಎಂದು ಹೇಳಿದರು.
ಅವರು ಮುಂದೆ ಮಾತನಾಡುತ್ತಾ, “ಈ ಗೌರವವನ್ನು ನಾನು ಭಾರತ ಮತ್ತು ಘಾನಾದ ಯುವಜನರ ಭವಿಷ್ಯ, ಸಾಂಸ್ಕೃತಿಕ ಪರಂಪರೆ ಮತ್ತು ನಮ್ಮ ನಡುವಿನ ಐತಿಹಾಸಿಕ ಸಂಬಂಧಗಳಿಗೆ ಅರ್ಪಿಸುತ್ತೇನೆ” ಎಂದು ತಿಳಿಸಿದರು.
ಮೋದಿ ಅವರು, “ಈ ಗೌರವ ದೊಡ್ಡ ಜವಾಬ್ದಾರಿ ಕೂಡ ಹೌದು. ಭಾರತ-ಘಾನಾ ಸ್ನೇಹ ಬಲವರ್ಧಿಸಲು ನಾವು ಸದಾ ಶ್ರಮಿಸುತ್ತೇವೆ. ಭಾರತ ಸದಾ ಘಾನಾ ಜನರೊಂದಿಗೆ ನಿಲ್ಲುತ್ತದೆ” ಎಂದರು.
ವಿದೇಶಾಂಗ ಇಲಾಖೆಯ ಪ್ರಕಾರ, ಈ ಪ್ರಶಸ್ತಿ ದೇಶಗಳ ನಡುವಿನ ಸ್ನೇಹವನ್ನು ಇನ್ನಷ್ಟು ಬಲಪಡಿಸುತ್ತದೆ ಮತ್ತು ಹೊಸ ಜವಾಬ್ದಾರಿಗಳನ್ನು ಉಂಟುಮಾಡುತ್ತದೆ. ಘಾನಾದ ಭೇಟಿಯಿಂದ ಭಾರತ-ಘಾನಾ ಸಂಬಂಧಗಳು ಹೊಸ ದಿಕ್ಕಿನಲ್ಲಿ ಸಾಗಲಿವೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ.