New Delhi: ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Ukrainian President Volodymyr Zelensky) ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.
ಇಬ್ಬರೂ ದ್ವಿಪಕ್ಷೀಯ ಸಹಕಾರ, ರಷ್ಯಾ-ಉಕ್ರೇನ್ ಯುದ್ಧ ಮತ್ತು ಇತ್ತೀಚಿನ ದಾಳಿಗಳ ಬಗ್ಗೆ ಚರ್ಚಿಸಿದರು.
ಝೆಲೆನ್ಸ್ಕಿ, ಜಪೋರಿಝಿಯಾ ಬಸ್ ನಿಲ್ದಾಣದ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಹಲವರು ಗಾಯಗೊಂಡ ವಿಚಾರ ತಿಳಿಸಿದರು. ರಷ್ಯಾ ಶಾಂತಿಗೆ ಸಮ್ಮತಿಸದೆ ದಾಳಿಗಳನ್ನು ಮುಂದುವರೆಸುತ್ತಿದೆ ಎಂದು ಅವರು ಹೇಳಿದರು. ಸಂಘರ್ಷ ಪರಿಹಾರಕ್ಕೆ ಉಕ್ರೇನ್ ನೇರವಾಗಿ ಭಾಗಿಯಾಗಬೇಕು, ರಷ್ಯಾ ಜೊತೆ ಮಾತ್ರ ಮಾತುಕತೆ ನಡೆಸಿದರೆ ಫಲಕಾರಿಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ತೈಲ ಸೇರಿದಂತೆ ರಷ್ಯಾದ ಇಂಧನ ರಫ್ತುಗಳಿಗೆ ನಿರ್ಬಂಧ ಹೇರಲು ಜಾಗತಿಕ ಒತ್ತಡದ ಅಗತ್ಯವಿದೆ ಎಂದು ಝೆಲೆನ್ಸ್ಕಿ ಹೇಳಿದರು. ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿರುವುದರಿಂದ ಈ ವಿಷಯವನ್ನು ಅವರು ಮೋದಿ ಮುಂದೆ ಪ್ರಸ್ತಾಪಿಸಿದರು.
ಪ್ರಧಾನಿ ಮೋದಿ, ಸಂಘರ್ಷದ ಶಾಂತಿಯುತ ಪರಿಹಾರದ ಪರ ಭಾರತದ ನಿಲುವು ಪುನರುಚ್ಚರಿಸಿದರು ಮತ್ತು ಝೆಲೆನ್ಸ್ಕಿ ಅವರ ಅಭಿಪ್ರಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತ-ಉಕ್ರೇನ್ ಸಂಬಂಧ ಬಲಪಡಿಸಲು ಹಲವು ಕ್ಷೇತ್ರಗಳಲ್ಲಿ ಸಹಕಾರದ ಬಗ್ಗೆ ಚರ್ಚಿಸಲಾಯಿತು.
ಮಾತುಕತೆಯಲ್ಲಿ ಆಗಸ್ಟ್ 15ರಂದು ಅಲಾಸ್ಕಾದಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಭೆಯ ಬಗ್ಗೆಯೂ ಚರ್ಚೆಯಾಯಿತು. ಈ ಸಭೆ ಉಕ್ರೇನ್ ಯುದ್ಧ ಅಂತ್ಯಗೊಳಿಸುವ ಉದ್ದೇಶ ಹೊಂದಿದೆ. ಭಾರತದ ವಿದೇಶಾಂಗ ಸಚಿವಾಲಯವು ರಾಜತಾಂತ್ರಿಕ ಪ್ರಯತ್ನಗಳ ಮಹತ್ವವನ್ನು ಒತ್ತಿ ಹೇಳಿದೆ.