ಮೇ 2023 ರಲ್ಲಿ ಮೈತಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆದ ಹಿಂಸಾಚಾರದಲ್ಲಿ 260 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸಾಮೂಹಿಕ ಅತ್ಯಾಚಾರಗಳು ನಡೆದಿದ್ದು, ರಾಜ್ಯ ಮಣಿಪುರ ಗಂಭೀರ ತೊಂದರೆಯಲ್ಲಿ ಕುಗ್ಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಮಣಿಪುರವನ್ನು ಭೇಟಿ ಮಾಡಿದ್ದಾರೆ. ಇದು ವಿರೋಧ ಪಕ್ಷಗಳ “ಮೋದಿ ಭೇಟಿ ಆಗುವುದಿಲ್ಲ” ಎಂಬ ಆರೋಪಗಳ ನಡುವೆ ತುಂಬ ಕುತೂಹಲ ಉಂಟುಮಾಡಿದೆ.
ಮಣಿಪುರದ ಚುರಚಂದ್ಪುರದಲ್ಲಿ ಕುಕಿ ಸಮುದಾಯಕ್ಕೆ ಸಂಬಂಧಿಸಿದ ನಿರಾಶ್ರಿತರನ್ನು ಭೇಟಿ ಮಾಡಲಿದ್ದಾರೆ. ನಂತರ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡುತ್ತಾ ಸಾರ್ವಜನಿಕ ಭಾಷಣ ಮಾಡಲಿದ್ದಾರೆ. ನಂತರ ಮೈತೀಸ್ ಬಹುಸಂಖ್ಯಾತರಿರುವ ಇಂಫಾಲ್ಗೆ ತೆರಳಿ ನಿರಾಶ್ರಿತರೊಂದಿಗೆ ಮಾತುಕತೆ ನಡೆಸಿ, ಒಟ್ಟು 8,500 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಈ ಮಧ್ಯೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೋದಿಯ ಮಣಿಪುರ ಭೇಟಿ ಬಗ್ಗೆ ವ್ಯಂಗ್ಯ ಮಾಡಿದರು. ಮಣಿಪುರದಲ್ಲಿ ದೀರ್ಘಕಾಲ ಸಮಸ್ಯೆ ಇದ್ದರೂ, ಈಗ ಹೋಗುತ್ತಿರುವುದು ಒಳ್ಳೆಯದಾಗಿದೆ. ಆದರೆ, ಅವರು ಹೇಳಿದ್ದು, ದೇಶದ ಪ್ರಮುಖ ಸಮಸ್ಯೆ ‘ವೋಟ್ ಚೋರಿ’, ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಗಳಲ್ಲಿ ಮತದಾನದಲ್ಲಿ ತೊಂದರೆ ಉಂಟಾಗಿದೆ.
ಮೋದಿ ಸ್ವಾಗತಕ್ಕೆ ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ಕುಕಿ-ಜೋ ಸಮುದಾಯದ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು, “ಕಣ್ಣಲ್ಲಿ ನೀರು ತುಂಬಿದರೆ ನೃತ್ಯ ಮಾಡಲಾಗುವುದಿಲ್ಲ” ಎಂದು ಹೇಳಿದ್ದಾರೆ. ಮೋದಿ ಭೇಟಿಯ ಹಿನ್ನೆಲೆ ಮಣಿಪುರದಲ್ಲಿ ಭಾರಿ ಭದ್ರತೆ ವಹಿಸಲಾಗಿದೆ.
ಫೆಬ್ರವರಿಯಲ್ಲಿ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಬಳಿಕ, ಕೇಂದ್ರ ಸರ್ಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದೆ. 2027 ರವರೆಗೆ ಅಧಿಕಾರಾವಧಿ ಹೊಂದಿದ್ದ ರಾಜ್ಯ ವಿಧಾನಸಭೆಯನ್ನು ಅಮಾನತುಗೊಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ಮೋದಿ ಭೇಟಿ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ.







