London, UK: ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರದಿಂದ ಎರಡು ದಿನಗಳ ಬ್ರಿಟನ್ (ಯುನೈಟೆಡ್ ಕಿಂಗ್ಡಮ್) ಭೇಟಿ ಆರಂಭಿಸಿದ್ದಾರೆ. ಈ ಭೇಟಿಯು ಭಾರತ ಹಾಗೂ ಯುಕೆ (India and Britain) ನಡುವೆ ರಕ್ಷಣಾ, ವ್ಯಾಪಾರ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ದಾರಿ ಮಾಡಿಕೊಡಲಿದೆ.
ಮೋದಿ ಅವರು ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ (FTA)ಕ್ಕೆ ಸಹಿ ಹಾಕಲಿದ್ದು, ಇದು ಎರಡೂ ರಾಷ್ಟ್ರಗಳ ಆರ್ಥಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
ಮೋದಿ ಅವರನ್ನು ಲಂಡನ್‌ನ ವಿಮಾನ ನಿಲ್ದಾಣದಲ್ಲಿ ಯುಕೆ ವಿದೇಶಾಂಗ ಕಾರ್ಯದರ್ಶಿ ಕ್ಯಾಥರೀನ್ ವೆಸ್ಟ್, ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಮತ್ತು ಬ್ರಿಟಿಷ್ ಹೈಕಮಿಷನರ್ ಲಿಂಡಿ ಕ್ಯಾಮರೂನ್ ಆತ್ಮೀಯವಾಗಿ ಬರಮಾಡಿಕೊಂಡರು.
ಈ ಬಗ್ಗೆ ಎಕ್ಸ್ ಹ್ಯಾಂಡಲ್ನಲ್ಲಿ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, “ಲಂಡನ್‌ನಲ್ಲಿ ಇದ್ದೇನೆ. ಈ ಭೇಟಿಯಿಂದ ಭಾರತ-ಯುಕೆ ನಡುವೆ ಸಮೃದ್ಧಿ, ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ದಾರಿ ಹರಿಯಲಿದೆ. ಜಾಗತಿಕ ಬೆಳವಣಿಗೆಗೆ ಬಲವಾದ ಭಾರತ-ಯುಕೆ ಸ್ನೇಹ ಅಗತ್ಯ” ಎಂದು ಹೇಳಿದರು.
ಇಂದು ಮೋದಿ ಅವರು ಬ್ರಿಟನ್ ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಲಂಡನ್ನಿಗೆ 50 ಕಿ.ಮೀ ದೂರದಲ್ಲಿರುವ ಸ್ಟಾರ್ಮರ್ ಅವರ ಅಧಿಕೃತ ನಿವಾಸ ಚೆಕರ್ಸ್ನಲ್ಲಿ ಈ ಮಾತುಕತೆ ನಡೆಯಲಿದೆ.
ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಬ್ರಿಟನ್ ಸಚಿವ ಜೋನಾಥನ್ ರೆನಾಲ್ಡ್ಸ್, ಪ್ರಧಾನಮಂತ್ರಿ ಅವರ ಸಮ್ಮುಖದಲ್ಲಿ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ.
ಈ ಒಪ್ಪಂದದಿಂದ ಭಾರತ ಶೇ.99 ರಷ್ಟು ವಸ್ತುಗಳ ರಫ್ತಿಗೆ ಸುಂಕ ರಹಿತ ಅನುಕೂಲ ಪಡೆಯಲಿದೆ. ಅದೇ ರೀತಿ ಬ್ರಿಟನ್ ನಿಂದ ಭಾರತಕ್ಕೆ ವಿಸ್ಕಿ, ಕಾರುಗಳು ಸೇರಿದಂತೆ ಹಲವು ಉತ್ಪನ್ನಗಳ ರಫ್ತು ಸುಲಭವಾಗಲಿದೆ. ಯುಕೆ ಯುರೋಪಿಯನ್ ಒಕ್ಕೂಟದಿಂದ ನಿರ್ಗಮಿಸಿದ ನಂತರ ಇದು ಅವರ ಅತಿದೊಡ್ಡ ವ್ಯಾಪಾರ ಒಪ್ಪಂದವಾಗಿದೆ.