Jakarta: ಇಂಡೋನೇಷ್ಯಾದ ದಕ್ಷಿಣ-ಮಧ್ಯ ಭಾಗದಲ್ಲಿರುವ ಮೌಂಟ್ ಲೆವೊಟೊಬಿ ಲಾಕಿ ಲಾಕಿ ಜ್ವಾಲಾಮುಖಿ (Mount Levotobi volcano eruption) ಶುಕ್ರವಾರ ಮೂರು ಬಾರಿ ಸ್ಫೋಟಗೊಂಡಿದ್ದು, 8,000 ಮೀಟರ್ ಎತ್ತರದವರೆಗೆ ಬೂದಿ ಹೊಗೆ ಆಕಾಶಕ್ಕೆ ಚಿಮ್ಮಿದೆ.
ಪೂರ್ವ ನುಸಾ ತೆಂಗರಾ ಪ್ರಾಂತ್ಯದ ಫ್ಲೋರೆಸ್ ದ್ವೀಪದಲ್ಲಿರುವ ಈ ಜ್ವಾಲಾಮುಖಿಯಲ್ಲಿ ನೂರಾರು ಭೂಕಂಪಗಳು ಸಂಭವಿಸಿವೆ. ಕಳೆದ ಏಳು ದಿನಗಳಿಂದ ಜ್ವಾಲಾಮುಖಿ ಚಟುವಟಿಕೆ ಹೆಚ್ಚಾಗಿದೆ.
ಗುರುವಾರ ತಡರಾತ್ರಿ ಮತ್ತು ಶುಕ್ರವಾರ ಮುಂಜಾನೆ ಸ್ಫೋಟಗಳಾದ ಬಳಿಕ, ಹಗಲಿನಲ್ಲಿ ಜ್ವಾಲಾಮುಖಿ ಶಾಂತವಾಗಿತ್ತು. ವೀಕ್ಷಣಾ ಪೋಸ್ಟ್ ವರದಿ ಪ್ರಕಾರ, ಭೂಕಂಪನಗಳ ಪ್ರಮಾಣ ಕಡಿಮೆಯಾಗಿತ್ತು.
ಸ್ಫೋಟದ ಎಚ್ಚರಿಕೆ ಮಟ್ಟವನ್ನು ಅತ್ಯುನ್ನತ ಮಟ್ಟಕ್ಕೆ ಏರಿಸಲಾಗಿದ್ದು, ಅಪಾಯದ ವಲಯವನ್ನು 7 ಕಿಮೀ ಯಿಂದ 8 ಕಿಮೀ ವರೆಗೆ ವಿಸ್ತರಿಸಲಾಗಿದೆ. ಈಗಾಗಲೇ ಸ್ಥಳೀಯ ಜನರನ್ನು ಸ್ಥಳಾಂತರಿಸಿದ ಕುರಿತು ಯಾವುದೇ ವರದಿ ಬಂದಿಲ್ಲ.
ಸ್ಫೋಟದಿಂದಾಗಿ ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದ ಪ್ರವಾಸಿ ದ್ವೀಪ ಬಾಲಿಯ ನಡುವಿನ ಹಲವಾರು ವಿಮಾನಯಾನ ಸೇವೆಗಳು ರದ್ದುಗೊಂಡಿದ್ದು, ಅನೇಕ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಸಂಚಾರಕ್ಕೆ ವಿಳಂಬವಾಗಿದೆ.
ಭಾರಿ ಮಳೆಯಿಂದಾಗಿ ಲಾವಾ ಹರಿದುಬರುವ ಸಾಧ್ಯತೆ ಇರುವುದರಿಂದ, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಇಂಡೋನೇಷ್ಯಾದ ಭೂವಿಜ್ಞಾನ ಸಂಸ್ಥೆ ಎಚ್ಚರಿಸಿದೆ.
ನವೆಂಬರ್‌ನಲ್ಲಿ ಈ ಜ್ವಾಲಾಮುಖಿ ಸ್ಫೋಟಗೊಂಡಾಗ ಒಂಬತ್ತು ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಇಂಡೋನೇಷ್ಯಾ 270 ಮಿಲಿಯನ್ ಜನರು ವಾಸಿಸುವ ದ್ವೀಪಸಮೂಹವಾಗಿದ್ದು, ಇಲ್ಲಿ 120 ಸಕ್ರಿಯ ಜ್ವಾಲಾಮುಖಿಗಳಿವೆ.







