
Muddenahalli, chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿರುವ ಮಧುಸೂದನ ಸಾಯಿ ಆರೋಗ್ಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಇತ್ತೀಚೆಗೆ ‘ಯುವ ಹೃದಯ ಉಳಿಸಿ’ ಕುರಿತು ವಿಶೇಷ ವಿಚಾರಗೋಷ್ಠಿ ನಡೆಯಿತು.
ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಅಪಾಯವನ್ನು ಮುಂಚಿತವಾಗಿ ಪತ್ತೆಹಚ್ಚಿ ತಡೆಗಟ್ಟುವಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ವೈದ್ಯರು, ಆರೋಗ್ಯ ತಜ್ಞರು, ಶಿಕ್ಷಣ ಕ್ಷೇತ್ರದ ಮತ್ತು ತಂತ್ರಜ್ಞಾನ ಕ್ಷೇತ್ರದ ತಜ್ಞರು, ಕಾರ್ಪೊರೇಟ್ ಪ್ರತಿನಿಧಿಗಳು ಹಾಗೂ ಮಾನವ ಸಂಪನ್ಮೂಲ ವಿಭಾಗದವರು ಚರ್ಚೆಯಲ್ಲಿ ಭಾಗವಹಿಸಿದರು.
ವಿಚಾರಗೋಷ್ಠಿಯಲ್ಲಿ ಆರೋಗ್ಯಕರ ಆಹಾರ ಪದ್ಧತಿ, ನಿದ್ರೆಯ ಮಹತ್ವ, ಭಾವನಾತ್ಮಕ ಒತ್ತಡ ನಿರ್ವಹಣೆ, ಸಿಪಿಆರ್ ತರಬೇತಿ ಮತ್ತು ನಿಯಮಿತ ತಪಾಸಣೆಯ ಅಗತ್ಯತೆಗಳ ಕುರಿತು ಚರ್ಚೆ ನಡೆಯಿತು. ಉಚಿತ ಚಿಕಿತ್ಸೆ ಹಾಗೂ ಸಮುದಾಯ ಆಧಾರಿತ ಆರೋಗ್ಯ ಸೇವೆಗಳ ಅಗತ್ಯತೆ ಕುರಿತು ಪ್ರಮುಖ ತಜ್ಞರು ಪ್ರಸ್ತಾಪಿಸಿದರು.
ರಕ್ತನಾಳಗಳ ಶಸ್ತ್ರಚಿಕಿತ್ಸಕ ಹಾಗೂ ‘ಯುವ ಹೃದಯಗಳನ್ನು ಉಳಿಸಿ ಪ್ರತಿಷ್ಠಾನ’ದ ಸ್ಥಾಪಕ ಡಾ. ಆನಂದ್ ಅಗರ್ವಾಲ್ ಮಾತನಾಡಿ, “ಯುವಜನರಲ್ಲಿ ಭಾವನಾತ್ಮಕ ಒತ್ತಡದಿಂದಾಗಿ ಉಂಟಾಗುವ ರಕ್ತನಾಳ ಉರಿಯೂತ, ನಿದ್ರಾಭಾವ, ಅನಿಯಮಿತ ಆಹಾರ ಪದ್ಧತಿ ಮತ್ತು ಸೂರ್ಯನ ಬೆಳಕಿಗೆ ದೂರವಿರುವ ಜೀವನಶೈಲಿಯು ಹೃದಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತಿವೆ” ಎಂದು ಎಚ್ಚರಿಸಿದರು.
ಐಎಪಿಎಸ್‌ಎಂ ಕರ್ನಾಟಕ ಘಟಕದ ಅಧ್ಯಕ್ಷ ಡಾ. ಅಣ್ಣಾರಾವ್ ಕುಲಕರ್ಣಿ, ಯೋಗದ ಮಹತ್ವವನ್ನು ಅಭಿವ್ಯಕ್ತಗೊಳಿಸಿದರು. ಸದ್ಗುರು ಮಧುಸೂದನ ಸಾಯಿ ಅವರು, “ಹೃದಯ ಕಾಯಿಲೆಗಳ ಆರ್ಥಿಕ ಹೊರೆ ಜನರ ಮೇಲೆ ಹೆಚ್ಚುತ್ತಿದೆ. ಕೈಗೆಟುಕುವ ಆರೋಗ್ಯ ಸೇವೆಗಳ ಸ್ಥಾಪನೆ ಅತ್ಯಗತ್ಯ” ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಬಾಲಕೃಷ್ಣನ್, ಡಾ. ರಘುಪತಿ ಎ.ಆರ್, ಬಿ.ಎನ್. ನರಸಿಂಹಮೂರ್ತಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಗೋಷ್ಠಿಯು ಯುವಜನ ಆರೋಗ್ಯದ ಪ್ರಸ್ತುತ ಪರಿಸ್ಥಿತಿಯನ್ನು ಬೆಳಕಿಗೆ ತಂದು, ತಾತ್ಕಾಲಿಕ ಹಾಗೂ ದೀರ್ಘಕಾಲೀನ ಪರಿಹಾರ ಮಾರ್ಗಗಳನ್ನು ಚರ್ಚಿಸಿದ ವೇದಿಕೆಯಾಯಿತು.
For Daily Updates WhatsApp ‘HI’ to 7406303366
The post ಮುದ್ದೇನಹಳ್ಳಿಯಲ್ಲಿ ‘ಯುವ ಹೃದಯ ಉಳಿಸಿ’ ವಿಚಾರಗೋಷ್ಠಿ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.