Mulbagal, Kolar : ಮುಳಬಾಗಿಲು ನಗರದ ಡಿವಿಜಿ ರಸ್ತೆಯಲ್ಲಿ (DVG Road) ಶಿಥಿಲಾವಸ್ಥೆಯಲ್ಲಿನ ಡಿವಿ ಗುಂಡಪ್ಪ (D. V. Gundappa) ಅವರ ಮನೆಯನ್ನು 150 ವರ್ಷಗಳ ಹಿಂದೆ ಸರ್ಕಾರಿ ಕನ್ನಡ ಶಾಲೆಗೆ ದಾನವಾಗಿ ನೀಡಲಾಗಿತ್ತು. ಹಳೇ ಕಟ್ಟಡದ ಸ್ಥಳದಲ್ಲಿ ₹2.5 ಕೋಟಿ ವೆಚ್ಚದಲ್ಲಿ ನೂತನ ಶಾಲೆ ಸಮುಚ್ಚಯ ನಿರ್ಮಾಣಕ್ಕೆ ಅಮೆರಿಕದ ಒಸಾಟ್ ಕಂಪನಿ ನಿರ್ಧರಿಸಿದ್ದು ಹಳೇ ಕಟ್ಟಡವನ್ನು ಸೆಪ್ಟೆಂಬರ್ 7 ರಂದು ನೆಲಸಮ ಮಾಡಲಾಗಿತ್ತು. ಆ ಸ್ಥಳದಲ್ಲಿ ನೂತನ ಕಟ್ಟಡ (DVG School) ನಿರ್ಮಾಣಕ್ಕೆ ಶುಕ್ರವಾರ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೂಮಿಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾತಾನಾಡಿದ ಸಚಿವರು “ಕನ್ನಡದ ಹೆಮ್ಮೆಯ ಕವಿ ಡಿವಿಜಿ ಅವರು ಈ ತಾಲ್ಲೂಕಿನವರಾಗಿರುವುದು ಹೆಮ್ಮೆಯ ಸಂಗತಿ. ಒಂಬತ್ತು ತಿಂಗಳಲ್ಲಿ ಕ್ರೀಡಾಂಗಣ, ಗ್ರಂಥಾಲಯ ಸೇರಿದಂತೆ ಮೂಲಸೌಕರ್ಯಗಳನ್ನೊಳಗೊಂಡ ಡಿವಿಜಿ ಸರ್ಕಾರಿ ಶಾಲೆ ಪ್ರಾರಂಬಿಸಲಾಗುವುದು. ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಸರ್ಕಾರದಿಂದ ಒದಗಿಸಲು ಶ್ರಮಿಸಲಾಗುವುದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ರಿಯಾಜ್ ಅಹಮದ್, ಸದಸ್ಯರಾದ ಎಸ್.ವೈ.ರಾಜಶೇಖರ್, ಎಂ.ಪ್ರಸಾದ್ ನಬಿ, ಸರ್ಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ.ಶ್ರೀಧರ್, ಕೋಲಾರ ಜಿಪಂ ಕಾರ್ಯನಿರ್ವಹಣಾಧಿಕಾರಿ ಮುಖೇಶ್ ಕುಮಾರ್, ತಹಶೀಲ್ದಾರ್ ಶೋಭಿತಾ, ತಾ.ಪಂ ಅಧಿಕಾರಿ ಡಾ.ಸರ್ವೇಶ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜೇಶ್ವರಿ ದೇವಿ, ಮುಖಂಡರಾದ ಶಂಕರ್ ಕೇಸರಿ, ಕೋಳಿ ನಾಗರಾಜ್, ಹರೀಶ್, ಶಾಲೆಯ ಮುಖ್ಯಶಿಕ್ಷಕ ಸೊಣ್ಣಪ್ಪ ಭಾಗಿಯಾಗಿದ್ದರು.