Mulbagal, Kolar : Covid-19 ಮೂರನೇ ಅಲೆ ನಿಯಂತ್ರಣ ಹಾಗೂ ಜಿಲ್ಲೆಯ ಸಮಸ್ಯೆಗಳ ಪರಿಹಾರದ ಹಿತದೃಷ್ಟಿಯಿಂದ ಖಾಯಂ ಜಿಲ್ಲಾಧಿಕಾರಿ (Deputy Commissioner) ಮತ್ತು ಜಿಲ್ಲಾ ಉಸ್ತುವಾರಿಯನ್ನು ನೇಮಕ (Appointment) ಮಾಡುವಂತೆ ಒತ್ತಾಯಿಸಿ ಜನವರಿ 20 ರಂದು ಜನಪ್ರತಿನಿಧಿಗಳ ಮನೆ ಮುಂದೆ ಸಗಣಿ ಚಳವಳಿ ಮಾಡುವ ನಿರ್ಧಾರವನ್ನು ಭಾನುವಾರ ನಡೆದ ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ರೈತಸಂಘದ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ “ರಾಜಕಾರಣಿಗಳ ಕೈಗೊಂಬೆಯಾಗಿ ಜಿಲ್ಲೆಗೆ ಬಂದರೆ ಮಾತ್ರ ಹಿರಿಯ ಅಧಿಕಾರಿಗಳಿಗೆ ಉಳಿಗಾಲ, ಇಲ್ಲವಾದರೆ ಸಂವಿಧಾನಕ್ಕೆ ವಿರೋಧವಾಗಿ 3 ತಿಂಗಳು, 6 ತಿಂಗಳಿಗೆ ವರ್ಗಾವಣೆಯ ಶಿಕ್ಷೆ ವಿಧಿಸುವ ಕಾಯಕವನ್ನು ಜನಪ್ರತಿನಿಧಿಗಳು ರೂಢಿಸಿಕೊಂಡಿದ್ದಾರೆ. ದಿವಂಗತ D.K. Ravi ವರ್ಗಾವಣೆಯಾದ ನಂತರ ಕೋಲಾರ ಜಿಲ್ಲೆಯಲ್ಲಿ ಒಂದು ವರ್ಷ ಯಾವುದೇ ಜಿಲ್ಲಾಧಿಕಾರಿ ಕೆಲಸ ನಿರ್ವಹಿಸಿರುವ ಉದಾಹರಣೆ ಇಲ್ಲ. ಜಿಲ್ಲೆಯ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಬಿಜೆಪಿ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದಾರೆ” ಎಂದರು.
ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮತ್ತು ಅಕ್ರಮಗಳಿಗೆ ಕಡಿವಾಣ ಹಾಕುತ್ತಿದ್ದ ಪೊಲೀಸ್ ವರಿಷ್ಠಾಧಿಕಾರಿಯನ್ನು ಒಂದು ವಾರದ ಅಂತರದಲ್ಲಿ ವರ್ಗಾವಣೆ ಮಾಡುವ ಮೂಲಕ ಸರ್ಕಾರ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಜಿಲ್ಲೆಯ ಅಭಿವೃದ್ಧಿ ಮತ್ತು ಕೊರೊನಾ ಮೂರನೇ ಅಲೆ ಸಮರ್ಪಕವಾದ ನಿರ್ವಹಣೆಯ ಹಿತದೃಷ್ಟಿಯಿಂದ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಖಾಯಂ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಜನವರಿ .20ರಂದು ಎಲ್ಲ ಜನಪ್ರತಿನಿಧಿಗಳ ಮನೆ ಮುಂದೆ ಸಗಣಿ ಚಳವಳಿ ಮಾಡುವ ನಿರ್ಧಾರ ಕೈಗೊಳ್ಳಲಾಯಿತು” ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ತಿಳಿಸಿದರು.
ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ, ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಶಿವನಾರಹಳ್ಳಿ ವೇಣು, ಹೆಬ್ಬಣಿ ಆನಂದರೆಡ್ಡಿ, ಮಣಿ, ಯಾರಂಘಟ್ಟ ಗಿರೀಶ್, ಪುತ್ತೇರಿ ರಾಜು, ಮಂಗಸಂದ್ರ ತಿಮ್ಮಣ್ಣ, ನಾಗೇಶ್, ಮಾಲೂರು ತಾಲ್ಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ ಉಪಸ್ಥಿತರಿದ್ದರು.