New Delhi: 2006ರ ಮುಂಬೈ ರೈಲು ಬಾಂಬ್ ಸ್ಫೋಟ ಪ್ರಕರಣದಲ್ಲಿ 189 ಮಂದಿ ಸಾವಿಗೀಡಾಗಿದ್ದ ಘಟನೆಗೆ ಸಂಬಂಧಿಸಿದಂತೆ, ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಈ ತೀರ್ಪಿನಲ್ಲಿ ಎಲ್ಲ 12 ಆರೋಪಿಗಳನ್ನು ಮುಕ್ತಗೊಳಿಸಲಾಗಿತ್ತು.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಆರೋಪಿಗಳ ವಿರುದ್ಧ ಸಾಕಷ್ಟು ನಿಖರವಾದ ಸಾಕ್ಷ್ಯಾಧಾರಗಳು ಇಲ್ಲವೆಂದು ಹೇಳಿತ್ತು. ಈ ಆಧಾರದಿಂದಾಗಿ ವಿಶೇಷ ನ್ಯಾಯಾಲಯ ನೀಡಿದ್ದ ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಗಳನ್ನು ರದ್ದುಗೊಳಿಸಿ ಬಿಡುಗಡೆ ಮಾಡಲಾಗಿತ್ತು.
ಇದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ನೇತೃತ್ವದ ಪೀಠವು ತಾತ್ಕಾಲಿಕ ತಡೆ ನೀಡಿತು.
ಆದರೆ, ಈಗಾಗಲೇ ಬಿಡುಗಡೆಗೊಂಡಿರುವ ಆರೋಪಿಗಳನ್ನು ಮತ್ತೆ ಜೈಲಿಗೆ ಹಾಕುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹೈಕೋರ್ಟ್ ತೀರ್ಪಿನ ಪ್ರಮುಖ ಅಂಶಗಳು
- ತನಿಖಾಧಿಕಾರಿಗಳು ಸೂಕ್ತ ಸಾಕ್ಷ್ಯ ಸಂಗ್ರಹಿಸಲು ವಿಫಲರಾದರು.
- ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆಗಳು ನೈಜವಲ್ಲ, ಚಿತ್ರಹಿಂಸೆ ನೀಡಿ ಬರೆಸಿದಂತೆ ಅನುಮಾನ.
- ಸ್ಫೋಟದಲ್ಲಿ ಯಾವ ಬಾಂಬ್ ಬಳಸಲಾಯಿತು ಎಂಬ ವಿವರವೂ ಸ್ಪಷ್ಟವಿಲ್ಲ.
- ಸಾಕ್ಷ್ಯಾಧಾರಗಳು ಆರೋಪಿಗಳನ್ನು ನೇರವಾಗಿ ತೋರಿಸುವಂತಿಲ್ಲ.
2006ರ ಜುಲೈ 11 ರಂದು ಮುಂಬೈನ ಏಳು ಉಪನಗರ ರೈಲುಗಳ ಫಸ್ಟ್ ಕ್ಲಾಸ್ ಬೋಗಿಗಳಲ್ಲಿ ಬಾಂಬ್ ಸ್ಫೋಟಗಳಾಗಿದ್ದವು. ಈ ದಾಳಿಯಲ್ಲಿ 189 ಮಂದಿ ಸಾವಿಗೀಡಾಗಿ, 800 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಪಾಕ್ ಮೂಲದ ಲಷ್ಕರ್ ಎ ತೊಯ್ಬಾ ಸಂಘಟನೆಯ ಸಹಕಾರದಿಂದ, ಸಿಮಿ ಸಂಘಟನೆಯ ಸದಸ್ಯರು ಈ ದಾಳಿಯನ್ನು ನಡೆಸಿದರೆಂದು ಆರೋಪಿಸಲಾಗಿದೆ. 2015ರಲ್ಲಿ 12 ಆರೋಪಿಗಳ ಪೈಕಿ ಐವರಿಗೆ ಮರಣದಂಡನೆ, ಉಳಿದ 7 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.