Devanahalli: ತಾಲ್ಲೂಕಿನ ತಿಂಡ್ಲು ಗ್ರಾಮದಲ್ಲಿ ಸುಧಾ ಮೂರ್ತಿ ಅವರ ಮೂರ್ತಿ ಟ್ರಸ್ಟ್ 1.50 ಕೋಟಿ ವೆಚ್ಚದಲ್ಲಿ ನೂತನ ಸರ್ಕಾರಿ ಶಾಲಾ ಕಟ್ಟಡವನ್ನು ನಿರ್ಮಿಸಿದೆ. ಸೋಮವಾರ ಆಹಾರ ಮತ್ತು ನಾಗರಿ ಪೂರೈಕೆ ಸಚಿವ ಕೆ. ಎಚ್. ಮುನಿಯಪ್ಪ ಹಾಗೂ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಈ ಕಟ್ಟಡವನ್ನು ಉದ್ಘಾಟಿಸಿದರು.
ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಶಾಲಾ ಕಟ್ಟಡದ ಸ್ಥಳದಲ್ಲಿ ನಿರ್ಮಿಸಿದ ಈ ನೂತನ ಕಟ್ಟಡದಲ್ಲಿ ನಾಲ್ಕು ಕೊಠಡಿಗಳು ಇವೆ. ಇದು ಜಾಲಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಸೇರಿದೆ.
ಉದ್ಘಾಟನಾ ಸಮಾರಂಭದಲ್ಲಿ ಸುಧಾ ಮೂರ್ತಿ ತಿಳಿಸಿದ್ದಾರೆ, “ಹಳೆಯ ಕಟ್ಟಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಕ್ಕಳು ಈಗ ನೂತನ ಕಟ್ಟಡದಲ್ಲಿ ಕಲಿಯುತ್ತಾರೆ. ಮುಂದಿನ ದಿನಗಳಲ್ಲಿ ಶಾಲೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು.” ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಈ ಯೋಜನೆ ಕೈಗೊಂಡು, ಪೋಷಕರು ಮತ್ತು ಮಕ್ಕಳು ಇದರ ಸದುಪಯೋಗ ಪಡೆಯಲು ಮನವಿ ಮಾಡಿದ್ದಾರೆ.
ಬಯಪ ಅಧ್ಯಕ್ಷ ವಿ. ಶಾಂತ ಕುಮಾರ್, ದೇವನಹಳ್ಳಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ. ಜಗನ್ನಾಥ್, ಜಾಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್ ಕುಮಾರ್ ಎಸ್.ಎಂ, ಉಪಾಧ್ಯಕ್ಷೆ ಭವ್ಯಾ ಕೆ. ಪ್ರಸಾದ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವಕುಮಾರ್, ಶಿಕ್ಷಣ ಇಲಾಖೆಯ ಉನಿರ್ದೇಶಕ ಬೈಲಾಂಜಿನಪ್ಪ, ದೇವನಹಳ್ಳಿ ತಹಶೀಲ್ದಾರ್ ಅನಿಲ್ ಎಂ., ಇಒ ಶ್ರೀನಾಥ್ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಮ್ಮ, ಜಾಲಿಗೆ ಪಿಡಿಒ ಪ್ರಕಾಶ್, ಶಾಲೆಯ ಶಿಕ್ಷಕ ವೃಂದ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.