Bengaluru: 2025ರ ಮೈಸೂರು ದಸರಾ (Mysuru Dasara) ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಗುರುವಾರ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ. ದಸರಾ ಉತ್ಸವ ಸೆಪ್ಟೆಂಬರ್ 22ರಂದು ಪ್ರಾರಂಭವಾಗಲಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠದ ಮುಂದೆ ಅರ್ಜಿದಾರರ ವಕೀಲರು ಪ್ರಕರಣವನ್ನು ತುರ್ತಾಗಿ ವಿಚಾರಿಸಲು ಒತ್ತಾಯಿಸಿದರು. ವಕೀಲರು ಚಾಮುಂಡೇಶ್ವರಿಗೆ ಪೂಜೆ ಮಾಡಲು ಹಿಂದೂಯೇತರ ವ್ಯಕ್ತಿಗೆ ಅವಕಾಶ ನೀಡಲಾಗಿದೆ, ಇದು ಸ್ಥಳೀಯ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು. ಸಿಐಜಿ ಗವಾಯಿ ವಿಚಾರಣೆ ನಡೆಸಲಾಗುವುದು ಎಂದು ಖಚಿತಪಡಿಸಿದರು.
ಕರ್ನಾಟಕ ಸರ್ಕಾರ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕರನ್ನಾಗಿ ಆಹ್ವಾನಿಸಿದೆ. ಇದರಿಂದ ಕನ್ನಡಪರ ಮತ್ತು ಹಿಂದು ಸಂಘಟನೆಗಳ ವಿರೋಧ ಉಂಟಾಗಿದೆ. ಮುಷ್ತಾಕ್ ಅವರು ಹಿಂದೂ ವಿರೋಧಿ ಮತ್ತು ಕನ್ನಡ ವಿರೋಧಿ ಹೇಳಿಕೆಗಳನ್ನು ಮಾಡಿದ್ದಾರೆ ಎಂಬ ಆರೋಪಗಳೊಂದಿಗೆ ವಿವಾದ ಉದ್ಭವಿಸಿದೆ.
ಇದಕ್ಕೂ ಮೊದಲು ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ವಿಚಾರಿಸಿ, ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಅರ್ಜಿಯೂ ಸೇರಿ ಎಲ್ಲ ಮನವಿಗಳನ್ನು ವಜಾ ಮಾಡಿತ್ತು. ಯಾವುದೇ ಸಾಂವಿಧಾನಿಕ ಅಥವಾ ಕಾನೂನು ಉಲ್ಲಂಘನೆ ಕಂಡುಬಂದಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಬೇರೆ ಧರ್ಮದ ವ್ಯಕ್ತಿಯೊಬ್ಬರು ರಾಜ್ಯ ಆಯೋಜಿತ ಕಾರ್ಯಕ್ರಮ ಉದ್ಘಾಟಿಸಿದರೆ ಸಂವಿಧಾನದ ಮೌಲ್ಯಗಳು ಉಲ್ಲಂಘಿಸಲ್ಪಡುತ್ತವೆ ಎಂಬುದು ಸಾಬೀತಾಗಿಲ್ಲ.
ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವೈದಿಕ ಮಂತ್ರಗಳ ಪಠಣದ ನಡುವೆ, ಮೈಸೂರು ಮತ್ತು ರಾಜಮನೆತನದವರ ಪ್ರಧಾನ ದೇವತೆಯಾದ ಚಾಮುಂಡೇಶ್ವರಿ ಮೂರ್ತಿಯ ಮೇಲೆ ಹೂವಿನ ದಳಗಳನ್ನು ಸುರಿಸುವ ಮೂಲಕ ಸಾಂಪ್ರದಾಯಿಕವಾಗಿ ದಸರಾವನ್ನು ಉದ್ಘಾಟಿಸಲಾಗುತ್ತದೆ.
ಸೆಪ್ಟೆಂಬರ್ 22ರಂದು ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಬಾನು ಮುಷ್ತಾಕ್ ಉದ್ಘಾಟನೆ ನಡೆಸುತ್ತಾರೆ. ಅಕ್ಟೋಬರ್ 2ರಂದು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗ ನಂದಿ ಧ್ವಜಕ್ಕೆ ಪುಷ್ಪಾರ್ಚನೆ ಮಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡುತ್ತಾರೆ. ಉದ್ಘಾಟನೆಯ ದಿನ ಫಲಪುಷ್ಪ ಪ್ರದರ್ಶನ, ಕುಸ್ತಿ, ಆಹಾರಮೇಳ, ವಿದ್ಯುತ್ ದೀಪಾಲಂಕಾರ, ಪುಸ್ತಕ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಸೆಪ್ಟೆಂಬರ್ 23ರಂದು ಯುವದಸರಾ, ಸೆ.27 ಮತ್ತು ಅ.1ರಂದು ಬನ್ನಿಮಂಟಪದಲ್ಲಿ ವೈಮಾನಿಕ ಪ್ರದರ್ಶನ, ಮೂರು ಸಾವಿರ ಡ್ರೋಣ್ ಗಳ ಹಾರಾಟಗಳು ನಡೆಯುತ್ತವೆ.