Mysuru: ಉದಯಗಿರಿ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲು (Mysore Udayagiri police station) ತೂರಾಟ ಪ್ರಕರಣದಲ್ಲಿ ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೌಲ್ವಿ ಮುಫ್ತಿ ಮುಸ್ತಾಕ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದ 11 ದಿನಗಳ ಬಳಿಕ ಅವರು ಪೊಲೀಸರ ವಶಕ್ಕೆ ಒಳಗಾಗಿದ್ದಾರೆ.
ಆರೋಪಿ ಬಂಧನದ ವಿಷಯದಲ್ಲಿ ಸಾರ್ವಜನಿಕರ ಮತ್ತು ಪ್ರತಿಪಕ್ಷಗಳ ಒತ್ತಡ ಹೆಚ್ಚಾಗಿತ್ತು. ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಕರ್ನಾಟಕ ಸರ್ಕಾರವನ್ನು ತಾಲಿಬಾನಿಗೆ ಹೋಲಿಸಿ, ” ಮೌಲ್ವಿಯರು ಭದ್ರತೆ ಕೇಳಿದರೆ ಸರ್ಕಾರ ನೀಡಲಿ, ಆದರೆ ಅಪರಾಧ ಮಾಡಿದರೆ ದಂಡಿಸಲೇಬೇಕು” ಎಂದು ಟೀಕಿಸಿದ್ದರು. ಸಿಟಿ ರವಿ ಸಹ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಂತರ, ಒಂದು ಸಾಮಾಜಿಕ ಮಾಧ್ಯಮ ಪೋಸ್ಟ್ ಗಲಭೆಗೆ ಕಾರಣವಾಗಿತ್ತು. ಪೋಸ್ಟ್‌ನಲ್ಲಿ ರಾಜಕೀಯ ನಾಯಕರು ಮತ್ತು ಧರ್ಮಕ್ಕೆ ಅವಹೇಳನವಾಗುವ ವಿಷಯಗಳು ಇದ್ದುದರಿಂದ ಉದಯಗಿರಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಬೆಳವಣಿಗೆಯ ನಂತರ, ಗೂಂಪೊಂದು ಠಾಣೆಯ ಮುಂದೆ ಸೇರಿ ಘೋಷಣೆ ಕೂಗುತ್ತಾ ಕಲ್ಲು ತೂರಾಟ ನಡೆಸಿತ್ತು. ಈ ಹಿನ್ನಲೆಯಲ್ಲಿ, ಕಲ್ಲು ತೂರಾಟಕ್ಕೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಮುಫ್ತಿ ಮುಸ್ತಾಕ್ ಅವರನ್ನು ಬಂಧಿಸಲಾಗಿದೆ.