Bengaluru : ನಂದಿನಿ ಹಾಲಿನ (Nandini Milk) ದರ ಏರಿಕೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಕರ್ನಾಟಕ ಹಾಲು ಮಹಾಮಂಡಳದ (KMF) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ತಿಳಿಸಿದರು.
ಕೆಎಂಎಫ್ 2020-21ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಅತಿ ಕಡಿಮೆ ಇದ್ದು, ಪ್ರತಿ ಲೀಟರ್ ಮೇಲೆ ₹ 3 ಹೆಚ್ಚಿಸಲು ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಕೋರಿದ್ದಾರೆ. ದರ ಹೆಚ್ಚಿಸಿದರೆ ಪ್ರತಿ ಲೀಟರ್ ಹಾಲು ₹ 37 ರಿಂದ ₹ 40 ಆಗಲಿದೆ ಮತ್ತು ಆ ಹಣವನ್ನು (₹ 3) ರೈತರಿಗೆ ನೀಡಲಾಗುವುದು’ ಎಂದು ಹೇಳಿದರು.
‘ಪ್ರಸಕ್ತ ವರ್ಷ (2021-22) ಕೆಎಂಎಫ್‌ನ 5 ಪಶು ಆಹಾರ ಘಟಕ ಗಳಿಂದ 7.28 ಲಕ್ಷ ಟನ್ ಪಶು ಆಹಾರ ಉತ್ಪಾದಿಸಿ ಮಾರಾಟ ಮಾಡುವ ಗುರಿ ಇದ್ದು, ಅಂದಾಜು ₹1,017 ಕೋಟಿ ವಹಿವಾಟು ನಿರೀಕ್ಷಿಸಲಾಗುತ್ತಿದೆ. ಬೆಳಗಾವಿಯಲ್ಲಿ ನಂದಿನಿ ಮೆಗಾ ಫುಡ್ ಪಾರ್ಕ್ ಆರಂಭಿಸುವ ಕಾರ್ಯ ಪ್ರಗತಿಯಲ್ಲಿದೆ. ಹೊರರಾಜ್ಯಗ ಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಸಮಗ್ರ ಮಾರುಕಟ್ಟೆ ಅಭಿವೃದ್ಧಿ ಯೋಜನೆಯನ್ನು ರೂಪಿಸಲಾಗಿದೆ’ ಎಂದರು.
ಸಭೆಯಲ್ಲಿ ರಾಜ್ಯದ ಎಲ್ಲಾ 14 ಹಾಲು ಒಕ್ಕೂಟಗಳ ಅಧ್ಯಕ್ಷರು, ಪ್ರತಿನಿಧಿಗಳು ಉಪಸ್ಥಿತರಿದ್ದರು.