Patna: ಬಿಹಾರ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮಗೊಂಡಿದೆ. ಎನ್ಡಿಎ ಮೈತ್ರಿ ಪಕ್ಷಗಳ ನಡುವೆ ನಡೆದ ಚರ್ಚೆಯ ನಂತರ, ಒಟ್ಟು 243 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಲಾಗಿದೆ. ಉಳಿದ ಕ್ಷೇತ್ರಗಳನ್ನು ಇತರೆ ಮೈತ್ರಿ ಪಕ್ಷಗಳಿಗೆ ಹಂಚಲಾಗಿದೆ.
ಜೆಡಿಯು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸಂಜಯ್ ಕುಮಾರ್ ಝಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) 29 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ, ಹಿಂದೂಸ್ತಾನಿ ಅವಾಮ್ ಮೋರ್ಚಾ (ಹೆಚ್ಎಎಂ) ಮತ್ತು ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಪಕ್ಷಗಳಿಗೆ ತಲಾ 6 ಸ್ಥಾನಗಳನ್ನು ನೀಡಲಾಗಿದೆ.
ಸಂಜಯ್ ಝಾ ಅವರು, “ಎಲ್ಲ ಎನ್ಡಿಎ ಪಕ್ಷಗಳು ಒಗ್ಗಟ್ಟಿನಿಂದ ಈ ನಿರ್ಧಾರವನ್ನು ಸ್ವೀಕರಿಸಿವೆ. ಬಿಹಾರ ಮತ್ತೆ ಎನ್ಡಿಎ ಸರ್ಕಾರ ರಚಿಸಲು ಸಿದ್ಧವಾಗಿದೆ” ಎಂದು ತಿಳಿಸಿದ್ದಾರೆ.
ಬಿಹಾರ ಚುನಾವಣಾ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೂಡ ಈ ಸೀಟು ಹಂಚಿಕೆಯನ್ನು ಸ್ವಾಗತಿಸಿ, “ಎಲ್ಲಾ ಮಾತುಕತೆಗಳು ಸೌಹಾರ್ದಯುತವಾಗಿ ನಡೆದಿವೆ. ಬಿಹಾರ ಸಿದ್ಧವಾಗಿದೆ, ಮತ್ತೆ NDA ಸರ್ಕಾರ ಬರಲಿದೆ” ಎಂದು ಹೇಳಿದ್ದಾರೆ.
ಹಿಂದೂಸ್ತಾನಿ ಅವಾಮ್ ಮೋರ್ಚಾ ಪಕ್ಷದ ನಾಯಕ ಜಿತನ್ ರಾಮ್ ಮಾಂಝಿ ಅವರು, ತಮ್ಮ ಪಕ್ಷಕ್ಕೆ ಆರು ಸ್ಥಾನಗಳು ಬಂದಿರುವುದನ್ನು ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ. “ನಾವು ತೃಪ್ತರಾಗಿದ್ದೇವೆ, ಯಾವುದೇ ಅಸಮಾಧಾನ ಇಲ್ಲ” ಎಂದು ಅವರು ಹೇಳಿದ್ದಾರೆ.
2020ರ ಚುನಾವಣೆಯಲ್ಲಿ ಜೆಡಿಯು 115 ಮತ್ತು ಬಿಜೆಪಿ 110 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು, ಹೆಚ್ಎಎಂ 7 ಕ್ಷೇತ್ರಗಳಲ್ಲಿ ಕಣಕ್ಕಿಳಿದು 4 ಸ್ಥಾನಗಳಲ್ಲಿ ಗೆದ್ದಿತ್ತು.