New Delhi, India : ಭಾರತದ ಸರ್ವೋಚ್ಚ ನ್ಯಾಯಾಲಯ (Supreme Court) NEET PG ಕೌನ್ಸೆಲಿಂಗ್ 2021 ರ ತೀರ್ಪನ್ನು ನೀಡಿದ್ದು, 27ರಷ್ಟು OBC ಕೋಟಾವನ್ನು ಎತ್ತಿಹಿಡಿದು UG ಮತ್ತು PG ಎರಡೂ ಕೋರ್ಸ್‌ಗಳಿಗೆ ಕೌನ್ಸೆಲಿಂಗ್ ಅನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿದೆ.
ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎ ಎಸ್ ಬೋಪಣ್ಣ ನೇತೃತ್ವದ ವಿಶೇಷ ಪೀಠವು ಪ್ರಕರಣದ ವಿಚಾರಣೆ ನಡೆಸಿತ್ತು. ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಅಖಿಲ ಭಾರತ ಕೋಟಾದಡಿ ಇತರೆ ಹಿಂದುಳಿದ ವರ್ಗಗಳಿಗೆ (OBC) ಶೇ 27ರಷ್ಟು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) ಶೇ 10ರಷ್ಟು ಮೀಸಲಾತಿಯ ಆಧಾರದಲ್ಲೇ ಕೌನ್ಸೆಲಿಂಗ್ ನಡೆಸಲು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದಲ್ಲಿ ಹೇಳಿದೆ.
NEET PG ಗಾಗಿ ಕೌನ್ಸೆಲಿಂಗ್ ಸುತ್ತಿನ ವಿಳಂಬದ ವಿರುದ್ಧ ವೈದ್ಯರು ಪ್ರತಿಭಟನೆ ನಡೆಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ವಿಷಯವನ್ನು ತುರ್ತಾಗಿ ಆಲಿಸಲು ಕೇಂದ್ರ ಸರ್ಕಾರ ಮಾಡಿದ ಮನವಿ ಮೇರೆಗೆ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಆಲಿಸಲು ಒಪ್ಪಿಕೊಂಡಿತ್ತು.
EWS ಕೋಟಾವನ್ನು ನಿರ್ಧರಿಸುವ ಮಾನದಂಡವನ್ನು ಮರುಪರಿಶೀಲಿಸುವ ಕೇಂದ್ರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರಿಂದ NEET PG ಕೌನ್ಸೆಲಿಂಗ್ ವಿಳಂಬವಾಗಿತ್ತು. ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (FORDA) ಅಡಿಯಲ್ಲಿ ವಿವಿಧ ಆಸ್ಪತ್ರೆಗಳ ನಿವಾಸಿ ವೈದ್ಯರು (Resident Doctors) ಕೌನ್ಸೆಲಿಂಗ್ ನ ವಿಳಂಬವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು.