
New Delhi: ಅಮೆರಿಕದಲ್ಲಿ ಕೆಲಸ ಮಾಡಲು ಬಯಸುವವರಿಗೆ ಪ್ರಮುಖ ಆಧಾರವಾಗಿರುವ ಎಚ್-1ಬಿ ವೀಸಾ (H-1B visa) ವ್ಯವಸ್ಥೆಯೇ ಒಂದು ಮೋಸ ಎಂದು ಅಲ್ಲಿನ ಸರ್ಕಾರ ಹೇಳಿದೆ. ಟ್ರಂಪ್ ಆಡಳಿತವು ಎಚ್-1ಬಿ ವೀಸಾ ಮತ್ತು ಗ್ರೀನ್ ಕಾರ್ಡ್ ನಿಯಮಗಳಲ್ಲಿ ದೊಡ್ಡ ಬದಲಾವಣೆ ತರುವ ಬಗ್ಗೆ ಯೋಚಿಸುತ್ತಿದೆ ಎಂದು ವಾಣಿಜ್ಯ ಇಲಾಖೆ ಕಾರ್ಯದರ್ಶಿ ಹೋವಾರ್ಡ್ ಲುಟ್ನಿಕ್ ಹೇಳಿದ್ದಾರೆ.
ಇದುವರೆಗೆ ಎಚ್-1ಬಿ ವೀಸಾ ಲಾಟರಿ ಪದ್ಧತಿಯಲ್ಲಿ ನೀಡಲಾಗುತ್ತಿತ್ತು. ಆದರೆ ಮುಂದೆ, ವೇತನ, ಕೌಶಲ್ಯ ಮುಂತಾದ ಮಾನದಂಡಗಳ ಆಧಾರದ ಮೇಲೆ ವೀಸಾ ನೀಡುವ ವ್ಯವಸ್ಥೆ ತರಬಹುದು. ಹೆಚ್ಚು ವೇತನ ಪಡೆಯುವವರಿಗೆ ಮೊದಲ ಆದ್ಯತೆ ಸಿಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಗ್ರೀನ್ ಕಾರ್ಡ್ ವಿತರಣೆ ಪದ್ಧತಿಯಲ್ಲೂ ಇದೇ ರೀತಿಯ ಬದಲಾವಣೆ ತರಲು ಅಮೆರಿಕ ಸಿದ್ದವಾಗುತ್ತಿದೆ. ಇದರ ಉದ್ದೇಶ ವಿದೇಶಿ ಕೆಲಸಗಾರರ ಪ್ರವೇಶವನ್ನು ಕಡಿಮೆ ಮಾಡಿ ಅಮೆರಿಕನ್ ನಾಗರಿಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವುದಾಗಿದೆ.
ಎಚ್-1ಬಿ ವೀಸಾ ಎಂದರೆ ವಿಶೇಷ ಪರಿಣತಿ ಹೊಂದಿರುವ ವಿದೇಶಿ ಕೆಲಸಗಾರರನ್ನು ಅಮೆರಿಕಕ್ಕೆ ಕರೆಸಿಕೊಳ್ಳುವ ವ್ಯವಸ್ಥೆ. ವರ್ಷಕ್ಕೆ ಸಾವಿರಾರು ವೀಸಾಗಳು ನೀಡಲಾಗುತ್ತವೆ. ಇದರಲ್ಲಿ ಹೆಚ್ಚಿನ ಪ್ರಮಾಣ ಭಾರತೀಯರ ಪಾಲಾಗುತ್ತಿತ್ತು.
ಆದರೆ ಹೊಸ ನಿಯಮಗಳಲ್ಲಿ ವೇತನ ಮಾನದಂಡ ತರುವುದರಿಂದ, ಅಮೆರಿಕನ್ ಕಂಪನಿಗಳು ಕಡಿಮೆ ಸಂಬಳಕ್ಕೆ ಭಾರತೀಯರನ್ನು ನೇಮಿಸಿಕೊಳ್ಳುವ ಅವಕಾಶ ತಪ್ಪಬಹುದು. ಹೀಗಾಗಿ ಕಂಪನಿಗಳು ಸ್ಥಳೀಯರನ್ನು ನೇಮಿಸಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ.
ಈ ಬದಲಾವಣೆಗಳು ಜಾರಿಗೆ ಬಂದರೆ, ಅಮೆರಿಕಕ್ಕೆ ಕೆಲಸಕ್ಕೆ ಹೋಗಲು ಕನಸು ಕಾಣುತ್ತಿರುವ ಅನೇಕ ಭಾರತೀಯರಿಗೆ ಇದು ದೊಡ್ಡ ನಿರಾಸೆಯಾಗಬಹುದು. ಜೊತೆಗೆ ಅಮೆರಿಕದ ಕಂಪನಿಗಳಿಗೆ ಹೆಚ್ಚಿನ ವೇತನದ ಹೊರೆ ಹೆಚ್ಚಾಗಲಿದೆ.