ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ (MCA Stadium in Pune) ನಡೆಯುತ್ತಿರುವ ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ (2nd Test match) ದ್ವಿತೀಯ ಇನಿಂಗ್ಸ್ನಲ್ಲಿ ನ್ಯೂಜಿಲೆಂಡ್ (New Zealand) ತಂಡವು 255 ರನ್ಗಳಿಗೆ ಆಲೌಟ್ ಆಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ 259 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಕೇವಲ 156 ರನ್ಗಳಿಗೆ ಆಲೌಟ್ ಆಗಿದ್ದರು.
ಮೊದಲ ಇನಿಂಗ್ಸ್ನಲ್ಲಿ 103 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕಿವೀಸ್ ಪರ ನಾಯಕ ಟಾಮ್ ಲ್ಯಾಥಮ್ 133 ಎಸೆತಗಳಲ್ಲಿ 10 ಫೋರ್ಗಳೊಂದಿಗೆ 86 ರನ್ ಬಾರಿಸಿದರು.
ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲಿ ಭಾರತ ತಂಡವು ಸೋಲನುಭವಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ಗಳಿಂದ ಪರಾಜಯಗೊಂಡಿತ್ತು.
ಇದೀಗ ಎರಡನೇ ಪಂದ್ಯದಲ್ಲಿ ಗೆದ್ದರೆ ಮಾತ್ರ ಟೀಮ್ ಇಂಡಿಯಾ ಸರಣಿ ಆಸೆಯನ್ನು ಜೀವಂತವಿರಿಸಿಕೊಳ್ಳಬಹುದು. ಹಾಗಾಗಿ ಟೀಮ್ ಇಂಡಿಯಾ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ.
ಇದೀಗ ಈ ನಿರ್ಣಾಯಕ ಪಂದ್ಯವು ಕೊನೆಯ ಇನಿಂಗ್ಸ್ನತ್ತ ಸಾಗಿದ್ದು, ಅದರಂತೆ ಭಾರತ ತಂಡವು 359 ರನ್ಗಳಿಸಿದರೆ ಸರಣಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸಬಹುದು.