New Delhi: ಹಳೆಯ ಕಾಲದಲ್ಲಿ, ಅಂಚೆ ಮೂಲಕ ಪತ್ರಗಳು ಅಥವಾ ಪಾರ್ಸೆಲ್ ಗಳು ತಲುಪಲು ಕನಿಷ್ಠ 3–5 ದಿನಗಳು ತೆಗೆದುಕೊಳ್ಳುತ್ತಿದ್ದವು. ಆದರೆ ಇನ್ನು ಮುಂದೆ ಇದು ಬದಲಾಗಲಿದೆ. ಅಂಚೆ ಇಲಾಖೆ ಹೊಸ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.
ಕೇಂದ್ರ ಸಂವಹನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ತಿಳಿಸಿದಂತೆ, ಮುಂದಿನ ವರ್ಷದಿಂದ 24 ಗಂಟೆ ಮತ್ತು 48 ಗಂಟೆಗಳೊಳಗೆ ಪತ್ರಗಳು ಮತ್ತು ಪಾರ್ಸೆಲ್ ಗಳನ್ನು ವಿತರಣಾ ಗ್ಯಾರಂಟಿ ಸೇವೆ ಮೂಲಕ ತಲುಪಿಸಲಾಗುವುದು. 2029 ರ ವೇಳೆಗೆ ಅಂಚೆ ಇಲಾಖೆ ಲಾಭದಾಯಕ ಇಲಾಖೆ ಆಗಲು ಯೋಜಿಸಿದೆ.
ಇತ್ತೀಚೆಗೆ ರಿಜಿಸ್ಟರ್ಡ್ ಪೋಸ್ಟ್ ವ್ಯವಸ್ಥೆಯನ್ನು ನಿಲ್ಲಿಸಿ, ಅಂಚೆ ಇಲಾಖೆ ಸ್ಪೀಡ್ ಪೋಸ್ಟ್ ವ್ಯವಸ್ಥೆಗೆ ಬದಲಾಯಿಸಿದೆ. ಈಗ ಇ-ಕಾಮರ್ಸ್ ಮಾದರಿಯಲ್ಲಿ ಬುಕ್ ಮಾಡಿದ ವಸ್ತುಗಳನ್ನು ಮರುದಿನವೇ ವಿತರಿಸುವ ವ್ಯವಸ್ಥೆಯನ್ನು ತರಲು ತಯಾರಾಗಿದೆ. ಮುಂದಿನ ವರ್ಷ 8 ರೀತಿಯ ಹೊಸ ಸೇವೆಗಳು ಲಭ್ಯವಾಗಲಿವೆ. ಮನೆ ಬಾಗಿಲಿಗೆ ಸೇವೆಗಳು, ಸರ್ಕಾರಿ ಯೋಜನೆಗಳು, ಆಧಾರ್ ಸೇವೆಗಳು ಮೊದಲಾದವು ಈಗಾಗಲೇ ಒದಗಿಸುತ್ತಿದೆ.
ಅಂಚೆ ಇಲಾಖೆ ‘ಪೋಸ್ಟಲ್ 2.0’ ಅನ್ನು ಅಡ್ವಾನ್ಸ್ಡ್ ಪೋಸ್ಟಲ್ ಟೆಕ್ನಾಲಜಿ (APT) ಮೂಲಕ ಜಾರಿಗೆ ತಂದಿದೆ. ಇದು ಗ್ರಾಹಕರಿಗೆ ಸೇವೆಗಳನ್ನು ವೇಗವಾಗಿ, ಡಿಜಿಟಲ್ ಹಾಗೂ ಸುಲಭವಾಗಿ ನೀಡುತ್ತದೆ. ಡಾಕ್ ಸೇವಾ ಅಪ್ಲಿಕೇಶನ್ ಮೂಲಕ ಮನೆಮನೆಯಿಂದಲೇ ಪೋಸ್ಟ್ ಬುಕ್ ಮಾಡಬಹುದು. ಎಲ್ಲಾ ಅಂಚೆ ಕಚೇರಿಗಳಲ್ಲಿ UPI ಪಾವತಿಗಳನ್ನು ಸಕ್ರಿಯಗೊಳಿಸಲಾಗಿದೆ.
ಅಂಚೆ ಇಲಾಖೆ ದೇಶಾದ್ಯಂತ ತನ್ನ ಸೇವೆಗಳಲ್ಲಿ ಮಹತ್ತರ update ಪ್ರಾರಂಭಿಸಿದೆ. ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಪೋಸ್ಟಲ್ ಟೆಕ್ನಾಲಜಿ (CEPT) ಸಹಾಯದಿಂದ ಜುಲೈ 22 ರಂದು ಜಾರಿಗೆ ಬಂದ ಹೊಸ ವ್ಯವಸ್ಥೆ ಗ್ರಾಮೀಣ ಪ್ರದೇಶದಿಂದ ನಗರ ಕೇಂದ್ರಗಳಿಗೆ ಅಂಚೆ ಸೇವೆಗಳನ್ನು ವೇಗವಾಗಿ, ಸುಲಭವಾಗಿ ಮತ್ತು ಬಳಕೆದಾರ ಸ್ನೇಹಿಯಾಗಿ ಒದಗಿಸುತ್ತದೆ.







