Sanaa (Yemen): ಕೇರಳದ ನರ್ಸ್ ನಿಮಿಷಾ ಪ್ರಿಯಾ (Nimisha Priya) ಅವರಿಗೆ ಯೆಮೆನ್ ನ್ಯಾಯಾಲಯ ನೀಡಿದ್ದ ಗಲ್ಲುಶಿಕ್ಷೆ ಇದೀಗ ರದ್ದುಗೊಂಡಿದೆ. ಇತ್ತೀಚೆಯ ದಿನಗಳಲ್ಲಿ ಭಾರತ ಹಾಗೂ ಯೆಮೆನ್ ಅಧಿಕಾರಿಗಳ ಪ್ರಯತ್ನದ ಫಲವಾಗಿ ಈ ನಿರ್ಧಾರ ಆಗಿದೆ ಎಂದು ಗ್ಲೋಬಲ್ ಪೀಸ್ ಇನಿಷಿಯೇಟಿವ್ ಸಂಸ್ಥಾಪಕ ಡಾ. ಕೆ.ಎ. ಪೌಲ್ ಹೇಳಿದ್ದಾರೆ.
“ಇದು ದೇವರ ದಯೆಯಿಂದ ಸಾಧ್ಯವಾಗಿದೆ. ಕಳೆದ 10 ದಿನಗಳಿಂದ ಭಾರತೀಯ ಅಧಿಕಾರಿಗಳು, ಧಾರ್ಮಿಕ ಮುಖಂಡರು ಎಲ್ಲರೂ ಸಹಕಾರ ನೀಡಿ ಪ್ರಯತ್ನಿಸಿದ ಪರಿಣಾಮ ಈ ಯಶಸ್ಸು ದೊರೆತಿದೆ. ನಿಮ್ಮೆಲ್ಲರ ಪ್ರಾರ್ಥನೆಗಳು ಫಲವನ್ನು ಕೊಟ್ಟಿವೆ” ಎಂದು ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ನಿಮಿಷಾ ಪ್ರಿಯಾ ಈಗ ಸನಾ ಜೈಲಿನಲ್ಲಿ ಇದ್ದಾರೆ. ಅವರನ್ನು ಓಮನ್, ಜೆಡ್ಡಾ, ಈಜಿಪ್ಟ್, ಇರಾನ್ ಅಥವಾ ಟರ್ಕಿ ಮೂಲಕ ಸುರಕ್ಷಿತವಾಗಿ ಭಾರತಕ್ಕೆ ತರಲು ಸರ್ಕಾರ ಯೋಜನೆ ಮಾಡುತ್ತಿದೆ. ಬಿಡುಗಡೆ ಆದ ಬಳಿಕ ಅವರನ್ನು ಭಾರತಕ್ಕೆ ತರಲಾಗುವುದು ಎಂದು ಡಾ. ಪೌಲ್ ಹೇಳಿದ್ದಾರೆ.
ಯೆಮೆನ್ ಪ್ರಜೆಯ ಹತ್ಯೆ ಪ್ರಕರಣದಲ್ಲಿ ನಿಮಿಷಾ ಪ್ರಿಯಾ ವಿರುದ್ಧ ಜುಲೈ 16ರಂದು ಗಲ್ಲು ಶಿಕ್ಷೆ ನಿಗದಿಯಾಗಿತ್ತು. ಆದರೆ ಕುಟುಂಬಸ್ಥರು ಹಾಗೂ ಧಾರ್ಮಿಕ ಮುಖಂಡರು ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಬಳಿ ಮಧ್ಯಪ್ರವೇಶವನ್ನು ಕೋರಿ ಮನವಿ ಸಲ್ಲಿಸಿದ್ದರು.
ವಿದೇಶಾಂಗ ಸಚಿವಾಲಯದ ವಕ್ತಾರ ರಣದೀಪ್ ಜೈಸ್ವಾಲ್ ಅವರು, ನಿಮಿಷಾ ಅವರನ್ನು ರಕ್ಷಿಸಲು ಸರ್ಕಾರ ಎಲ್ಲಾ ಸಾಧ್ಯವಾದ ಕ್ರಮಗಳನ್ನು ತೆಗೆದುಕೊಂಡಿದೆ. ವಕೀಲರನ್ನು ನೇಮಿಸಿದ್ದು, ಷರಿಯಾ ಕಾನೂನಿನಡಿಯಲ್ಲಿ ಕ್ಷಮಾದಾನ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕೇರಳದ ಮುಸ್ಲಿಂ ಧರ್ಮಗುರು ಶೇಖ್ ಅಬುಬಕರ್ ಅಹ್ಮದ್ ಕಾಂತಪುರಂ ಅವರು ಯೆಮೆನ್ ಧಾರ್ಮಿಕ ಮುಖಂಡರೊಂದಿಗೆ ಮಾತುಕತೆ ನಡೆಸಿದ ಬಳಿಕ ಗಲ್ಲುಶಿಕ್ಷೆ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.