Bengaluru: UPI ಮುಖಾಂತರ ₹2,000 ಕ್ಕಿಂತ ಹೆಚ್ಚಿನ ವಹಿವಾಟುಗಳ ಮೇಲೆ GST ವಿಧಿಸುವ ಯಾವುದೇ ಯೋಜನೆ ಸರ್ಕಾರದಿಲ್ಲ (Government) ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ. GST ಮಂಡಳಿಯೂ ಈ ಸಂಬಂಧ ಯಾವುದೇ ಶಿಫಾರಸು ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಈ ಪ್ರತಿಕ್ರಿಯೆ ಕರ್ನಾಟಕದ ವ್ಯಾಪಾರಿಗಳಿಗೆ ಯುಪಿಐ ಆಧಾರಿತ ವಹಿವಾಟುಗಳ ಮೇಲೆ GST ನೋಟಿಸ್ ಗಳು ಬಂದ ಬಳಿಕ ಬಂದಿದೆ. ಈ ಬಗ್ಗೆ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ, “ಈ ನೋಟಿಸ್ ಗಳು ರಾಜ್ಯ ಸರ್ಕಾರದಿಂದಲೇ ಬಂದಿವೆ, ಕೇಂದ್ರದ ಯಾವುದೇ ಪಾತ್ರವಿಲ್ಲ,” ಎಂದು ಸ್ಪಷ್ಟಪಡಿಸಿದರು.
ಆದರೆ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, “ಜೋಶಿಯವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ರಾಜ್ಯ ಸರ್ಕಾರ ಯಾವುದೇ ನೋಟಿಸು ನೀಡಿಲ್ಲ,” ಎಂದು ತಿಳಿಸಿದ್ದಾರೆ.
ಜೋಶಿ ಮತ್ತೆ ಟಾಂಗ್ ನೀಡಿ, “ರಾಜ್ಯದ ವಾಣಿಜ್ಯ ತೆರಿಗೆ ಅಧಿಕಾರಿಗಳು ಈ ನೋಟಿಸುಗಳನ್ನು ನೀಡಿದ್ದಾರೆ. ಈಗ ರಾಜ್ಯ ಸರ್ಕಾರ ನಿಷ್ಕಳಂಕವಾಗಿದೆ ಎಂಬಂತೆ ನಟಿಸುತ್ತಿರುವುದು ಸಾರ್ವಜನಿಕರನ್ನು ದಾರಿ ತಪ್ಪಿಸುವಂತಾಗಿದೆ,” ಎಂದು ಆರೋಪಿಸಿದರು.
ಅವರ ಪ್ರಕಾರ, GST ಎರಡು ಭಾಗಗಳಿವೆ – ಕೇಂದ್ರದ CGST ಮತ್ತು ರಾಜ್ಯದ SGST. ಈ ನೋಟಿಸುಗಳು ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆ ಮೂಲಕವೇ ಬಂದಿರುವುದು ಸ್ಪಷ್ಟ ಎಂದು ಜೋಶಿ ಹೇಳಿದರು.
UPI ಮೂಲಕ ₹2,000 ಗಿಂತ ಹೆಚ್ಚಿನ ವಹಿವಾಟುಗಳಿಗೆ ಯಾವುದೇ GST ವಿಧಿಸುವ ಯೋಜನೆ ಕೇಂದ್ರ ಸರ್ಕಾರಕ್ಕಿಲ್ಲ. ಆದರೆ, ಕರ್ನಾಟಕದಲ್ಲಿ ಈ ಸಂಬಂಧ ವ್ಯಾಪಾರಿಗಳಿಗೆ ನೋಟಿಸು ಬಂದಿರುವ ಬಗ್ಗೆ ಕೇಂದ್ರ ಮತ್ತು ರಾಜ್ಯದ ನಡುವಿನ ರಾಜಕೀಯ ಚರ್ಚೆ ಮುಂದುವರೆದಿದೆ.