Bengaluru: ಮಂಡ್ಯ ಕೃಷಿ ವಿಶ್ವವಿದ್ಯಾಲಯದ (Mandya Agricultural University) ಹೆಸರಿನಲ್ಲಿ ರಾಜಕೀಯ ಮಾಡಲು ನಾನು ಆಸಕ್ತನಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ತಿಳಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, “ಮಂಡ್ಯ ಕೃಷಿ ವಿವಿ ಕುರಿತು ನನಗೆ ಸಂಬಂಧಿಸಿದಂತೆ ಸೃಷ್ಟಿಯಾಗಿರುವ ರಾಜಕೀಯ ದುರುದ್ದೇಶದ ಅಪಪ್ರಚಾರ ನೋವಿನ ಸಂಗತಿ. ಜಿಲ್ಲೆಯ ಅಭಿವೃದ್ಧಿಗೆ ನಾನು ಸದಾ ಬೆಂಬಲ” ಎಂದು ಹೇಳಿದ್ದಾರೆ.
“ಮಂಡ್ಯ ಕೃಷಿ ವಿವಿ ಸ್ಥಾಪನೆಗೆ ನಾನು ಹೃದಯಪೂರ್ವಕ ಸ್ವಾಗತ ಕೋರುತ್ತೇನೆ. ನಾನು ಯಾವತ್ತೂ ರಾಜಕೀಯವನ್ನು ಅಭಿವೃದ್ಧಿಯೊಂದಿಗೆ ಮಿಶ್ರಗೊಳಿಸಿಲ್ಲ. ಇದು ನನ್ನ ವ್ಯಕ್ತಿತ್ವಕ್ಕೆ ಹೊಂದುವುದಿಲ್ಲ. ಕೃಷಿ ವಿವಿ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವ ಚಿಂತೆ ನನಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ತಮ್ಮ ಸರ್ಕಾರದ ಅವಧಿಯಲ್ಲಿ ಮಂಡ್ಯ ಜಿಲ್ಲೆಗೆ ನೀಡಿದ್ದ ಬಜೆಟ್ ಸಹಾಯಧನವನ್ನು ನೆನಪಿಸಿಕೊಂಡು, “ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವನು ನಾನು. ಮಂಡ್ಯ ಜನತೆ ಹಾಗೂ ನನ್ನ ನಡುವೆ ಇರುವ ಬಾಂಧವ್ಯವನ್ನು ಹಾಳುಮಾಡಲು ಯಾರೂ ಪ್ರಯತ್ನಿಸಬಾರದು” ಎಂದು ಹೇಳಿದ್ದಾರೆ.
“ನನ್ನನ್ನು ಸಂಸದನನ್ನಾಗಿ ಆಯ್ಕೆ ಮಾಡಿರುವ ಮಂಡ್ಯ ಜನತೆಗೆ ನಾನು ಸದಾ ಋಣಿಯಾಗಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದೇನೆ. ಕೇಂದ್ರ ಸಚಿವನಾಗಿ ರಾಜ್ಯದ ಅಭಿವೃದ್ದಿಗೆ ಬದ್ಧನಾಗಿದ್ದೇನೆ” ಎಂದು ಅವರು ಪುನರುಚ್ಛಾರ ಮಾಡಿದ್ದಾರೆ.
ಸಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಿಡಿಕಾರಿದ ಹೆಚ್ಡಿಕೆ, “ತಿಳಿಗೇಡಿಗಳು ಮತ್ತು ಸತ್ಯವನ್ನು ಮುಚ್ಚಿಹಾಕಲು ಯತ್ನಿಸುವವರು ನಿಜವನ್ನು ಅರಿತುಕೊಳ್ಳಲಿ” ಎಂದು ಎಚ್ಚರಿಸಿದ್ದಾರೆ.