Bengaluru: ಬೆಂಗಳೂರು ನಗರದಲ್ಲಿ ಮನೆಗಳ್ಳತನ (House Theft) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ತಡೆಗಟ್ಟಲು ಬೆಂಗಳೂರು ಪೊಲೀಸರು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.
ಒಂದು ದಿನಕ್ಕಿಂತ ಹೆಚ್ಚು ದಿನಗಳ ಪ್ರವಾಸಕ್ಕೆ ಅಥವಾ ಊರಿಗೆ ಹೋಗುವವರು ತಮ್ಮ ಮನೆಯ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಸ್ಥಳೀಯ ಪೊಲೀಸ್ ಠಾಣೆಗೆ ತಮ್ಮ ಪ್ರವಾಸದ ಬಗ್ಗೆ ಮಾಹಿತಿ ನೀಡಿದರೆ, ಹೊಯ್ಸಳ ಸಿಬ್ಬಂದಿ ಅವರ ಮನೆಯನ್ನು ಕಾವಲು ಕಾಯುತ್ತಾರೆ. ಸದ್ಯ, ಈ ವ್ಯವಸ್ಥೆ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಆರಂಭಗೊಂಡಿದ್ದು, ಶೀಘ್ರದಲ್ಲೇ ಇತರ ವಿಭಾಗಗಳಿಗೂ ವಿಸ್ತರಿಸಲಾಗುತ್ತದೆ.
ಪ್ರವಾಸಕ್ಕೆ ಹೊರಡುವ ಮುನ್ನ, ದಕ್ಷಿಣ ವಿಭಾಗದ ಪೊಲೀಸ್ ಕಂಟ್ರೋಲ್ ರೂಮ್ 080-22943111 ಅಥವಾ 9480801500 ಗೆ ಕರೆ ಮಾಡಿ ಮನೆಯ ವಿಳಾಸ, ಫೋಟೋ ಮತ್ತು ಸಂಪರ್ಕ ಸಂಖ್ಯೆ ನೀಡಬೇಕು.
ಮನೆಯ ರಕ್ಷಣೆ ಹೇಗೆ?
- ಕಂಟ್ರೋಲ್ ರೂಮ್ ಸಿಬ್ಬಂದಿ ಈ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡುತ್ತಾರೆ.
- ಪೊಲೀಸ್ ಠಾಣೆ ಅಧಿಕಾರಿಗಳು ಖಾಲಿ ಮನೆಗಳ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ.
- ಈ ಪಟ್ಟಿಯನ್ನು ಹೊಯ್ಸಳ ಸಿಬ್ಬಂದಿಗೆ ನೀಡಲಾಗುತ್ತದೆ, ಅವರು ರಾತ್ರಿ ಗಸ್ತು ತಿರುಗುವಾಗ ಮನೆಯ ಮೇಲೆ ನಿಗಾ ಇರಿಸುತ್ತಾರೆ.
2023ರಲ್ಲಿ ಬೆಂಗಳೂರು ನಗರದಲ್ಲಿ 879 ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದು, 264 ಪ್ರಕರಣಗಳು ಮಾತ್ರ ಬಗೆಹರಿಸಲಾಗಿದೆ. 2022ರಲ್ಲಿ 702 ಮತ್ತು 2021ರಲ್ಲಿ 654 ಪ್ರಕರಣಗಳು ವರದಿಯಾಗಿದ್ದವು.
ಈ ಹೊಸ ವ್ಯವಸ್ಥೆಯ ಮೂಲಕ ಮನೆಗಳ್ಳತನ ಪ್ರಕರಣಗಳನ್ನು ತಡೆಯಲು ಬೆಂಗಳೂರು ಪೊಲೀಸರು ಹೊಸ ಹೆಜ್ಜೆ ಇಟ್ಟಿದ್ದಾರೆ.