
ಭಾರತ–ಪಾಕಿಸ್ತಾನ ವಿಷಯದಲ್ಲಿ ಹಸ್ತಕ್ಷೇಪ ಮಾಡಿದಂತೆ, ಈಗ ಉಕ್ರೇನ್ ಹಾಗೂ ರಷ್ಯಾ (US-Russia) ನಡುವೆ ನಡೆಯುತ್ತಿರುವ ಸಮಸ್ಯೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ. ದೇಶಗಳ ನಾಯಕರು ತಮ್ಮದೇ ಮಾತುಕತೆ ನಡೆಸದೇ ಇದ್ದರೂ, ಟ್ರಂಪ್ ತಮ್ಮ ಪರವಾಗಿ ಮಾತನಾಡಿ ಕ್ರೆಡಿಟ್ ಪಡೆಯಲು ಯತ್ನಿಸುತ್ತಿದ್ದಾರೆ.
ಮುಂಬರುವ ದಿನಗಳಲ್ಲಿ ಟ್ರಂಪ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಬಹುದು ಎಂಬ ವರದಿ ಬಂದಿದೆ. ಈ ವಿಷಯದ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಆದರೆ, ಅಮೆರಿಕಾ–ರಷ್ಯಾ ಮಾತುಕತೆಗೂ ಮುನ್ನ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭೇಟಿಯಾಗುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. “ಝೆಲೆನ್ಸ್ಕಿ ಬರದಿದ್ದರೂ ನಾನು ಪುಟಿನ್ ಅವರನ್ನು ಭೇಟಿಯಾಗುತ್ತೇನೆ” ಎಂದೂ ಹೇಳಿದ್ದಾರೆ.
ಪುಟಿನ್–ಟ್ರಂಪ್ ಸಭೆಯ ಸ್ಥಳ ಇನ್ನೂ ದೃಢವಾಗಿಲ್ಲ. ಆದರೆ ಮುಂದಿನ ವಾರ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಪುಟಿನ್ ಈ ಸಭೆಯ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ. ಸಭೆಯ ವ್ಯವಸ್ಥಾಪನಾ ವಿವರಗಳು ಇನ್ನೂ ಅಂತಿಮಗೊಳಿಸಲಾಗುತ್ತಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.
ಟ್ರಂಪ್ ಎರಡನೇ ಅವಧಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಪುಟಿನ್ ಅವರೊಂದಿಗಿನ ಇದು ಮೊದಲ ಅಧಿಕೃತ ಸಭೆಯಾಗಲಿದೆ. ಕೊನೆಯ ಯುಎಸ್–ರಷ್ಯಾ ಅಧ್ಯಕ್ಷೀಯ ಸಭೆ ಜೂನ್ 2021ರಲ್ಲಿ ನಡೆದಿದ್ದು, ಆಗಿನ ಅಧ್ಯಕ್ಷ ಜೋ ಬೈಡೆನ್ ಮತ್ತು ಪುಟಿನ್ ಜಿನೀವಾದಲ್ಲಿ ಭೇಟಿಯಾಗಿದ್ದರು.
ಟ್ರಂಪ್, ಉಕ್ರೇನ್‌ಗೆ ನ್ಯಾಟೋ ಮಿತ್ರ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರ ಮಾರಾಟಕ್ಕೆ ಅನುಮತಿ ನೀಡಿದ್ದಾರೆ. ಪುಟಿನ್ ಮಾತುಕತೆಗಳನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಶಾಂತಿ ಮಾತುಕತೆ ಪ್ರಗತಿ ಸಾಧಿಸದಿದ್ದರೆ ರಷ್ಯಾದ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸುವುದಾಗಿ ಎಚ್ಚರಿಸಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ಮತ್ತು ಸಿಎನ್ಎನ್ ಪ್ರಕಾರ, ಟ್ರಂಪ್ ಮುಂದಿನ ವಾರ ಪುಟಿನ್ ಅವರನ್ನು ಭೇಟಿಯಾದ ನಂತರ, ಪುಟಿನ್ ಮತ್ತು ಝೆಲೆನ್ಸ್ಕಿ ಇಬ್ಬರೊಂದಿಗೆ ಮಾತನಾಡುವ ಸಾಧ್ಯತೆ ಇದೆ. ಒಂದು ವೇಳೆ ಈ ಸಭೆ ನಡೆದರೆ, ಇದು ಟ್ರಂಪ್ ಅವರ ಎರಡನೇ ಅವಧಿಯ ಪುಟಿನ್ ಅವರೊಂದಿಗೆ ಮೊದಲ ಭೇಟಿಯಾಗಲಿದೆ. ಆದರೆ, ಟ್ರಂಪ್ ಈಗಾಗಲೇ ಝೆಲೆನ್ಸ್ಕಿ ಅವರನ್ನು ಹಲವು ಬಾರಿ ಭೇಟಿಯಾಗಿದ್ದಾರೆ, ಇದರಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ನಡೆದ ವಿವಾದಾತ್ಮಕ ಸಭೆಯೂ ಸೇರಿದೆ.