Washington: ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಹೇರಿದ ಟ್ಯಾರಿಫ್‌ಗಳಿಂದ ಗೊಂದಲ ಸೃಷ್ಟಿಯಾಗಿತ್ತು. ಆದರೆ ಚಿನ್ನದ ಗಟ್ಟಿಗಳಿಗೆ ಸುಂಕ ಅನ್ವಯಿಸುವುದಿಲ್ಲ ಎಂದು ಟ್ರಂಪ್ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ಅಮೆರಿಕದ ಕಸ್ಟಮ್ಸ್ ಇಲಾಖೆಯ ಪತ್ರವೊಂದರಲ್ಲಿ, ಒಂದು ಕಿಲೋ ಮತ್ತು 100 ಔನ್ಸ್ ತೂಕದ ಚಿನ್ನದ ಬಾರ್ಗಳು ಸುಂಕಕ್ಕೆ ಒಳಪಟ್ಟಿರುತ್ತವೆ ಎಂದು ತಿಳಿಸಿದ್ದರಿಂದ ಊಹಾಪೋಹಗಳು ಹೆಚ್ಚಿದ್ದವು. ಈ ಹಿನ್ನೆಲೆಯಲ್ಲಿ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಸ್ಪಷ್ಟನೆ ನೀಡಿದರು.
ಫೈನಾನ್ಷಿಯಲ್ ಟೈಮ್ಸ್ ವರದಿ ಪ್ರಕಾರ, ಈ ಗೊಂದಲದಿಂದ ಅಮೆರಿಕದ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಾಖಲೆಯ ಮಟ್ಟಕ್ಕೆ ಏರಿಕೆಯಾಯಿತು. ಶ್ವೇತಭವನದ ಅಧಿಕಾರಿಗಳ ಪ್ರಕಾರ, ಚಿನ್ನದ ಉತ್ಪನ್ನಗಳ ಮೇಲಿನ ಸುಂಕದ ಬಗ್ಗೆ ಇರುವ ತಪ್ಪುಮಾಹಿತಿಯನ್ನು ನಿವಾರಿಸಲು ಟ್ರಂಪ್ ಆಡಳಿತ ಕಾರ್ಯನಿರ್ವಾಹಕ ಆದೇಶ ಹೊರಡಿಸಲು ಯೋಚಿಸುತ್ತಿದೆ.
ಸ್ವಿಟ್ಜರ್ಲ್ಯಾಂಡ್‌ನಿಂದ ಅಮೆರಿಕಕ್ಕೆ ಬರುವ ಚಿನ್ನದ ಬಹುಭಾಗ ಕಾಮೆಕ್ಸ್ ಮಾರುಕಟ್ಟೆಯಲ್ಲಿ ಒಂದು ಕಿಲೋ ಬಾರ್ಗಳ ರೂಪದಲ್ಲೇ ವ್ಯಾಪಾರವಾಗುತ್ತದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಹೂಡಿಕೆದಾರರ ಬೇಡಿಕೆಯ ಹಿನ್ನೆಲೆಯಲ್ಲಿ, ಚಿನ್ನ ಈ ವರ್ಷ ದಾಖಲೆಯ ಗರಿಷ್ಠ ದರ ತಲುಪಿದೆ.