Mumbai: ರತನ್ ಟಾಟಾ (Ratan Tata) ಬಳಿಕ ಟಾಟಾ ಗ್ರೂಪ್ಗೆ ನೋಯಲ್ (Noel Tata) ಅವರೇ ವಾರಸುದಾರರಾಗಿದ್ದಾರೆ. ಟಾಟಾ ಟ್ರಸ್ಟ್ಗಳಿಗೆ (Tata Trust) ನೋಯಲ್ ಅವರೇ ಛೇರ್ಮನ್ ಆಗಿದ್ದಾರೆ.
ಆದರೆ, ಟಾಟಾದ ಬಿಸಿನೆಸ್ ನಿಯಂತ್ರಿಸುವುದು ಟಾಟಾ ಸನ್ಸ್ ಸಂಸ್ಥೆ (Tata Sons Chairman). ಟಾಟಾ ಸನ್ಸ್ನ ನಿಯಂತ್ರಣ ಟಾಟಾ ಟ್ರಸ್ಟ್ ಕೈಯಲ್ಲಿದೆ.
ಆದರೂ ಕೂಡ ನೋಯಲ್ ಟಾಟಾ ಅವರು ಟಾಟಾ ಸನ್ಸ್ ಛೇರ್ಮನ್ (Tata Sons Chairman) ಆಗಲು ಸದ್ಯಕ್ಕೆ ಸಾಧ್ಯವಿಲ್ಲ. ಎರಡು ವರ್ಷದ ಹಿಂದೆ ಟಾಟಾ ಸನ್ಸ್ ಸಂವಿಧಾನದಲ್ಲಿ ಮಾಡಲಾದ ಕೆಲ ನಿಯಮ ಬದಲಾವಣೆಗಳು ಇದಕ್ಕೆ ಕಾರಣ ಎನ್ನಲಾಗಿದೆ.
ಟಾಟಾ ಸಂಸ್ಥೆಗಳ ಮಧ್ಯೆ ಹಿತಾಸಕ್ತಿ ಸಂಘರ್ಷವಾಗದಂತೆ ನಿಯಂತ್ರಿಸಲು ಟಾಟಾ ಸನ್ಸ್ ಸಂಸ್ಥೆಯ ಕಾನೂನುಗಳಲ್ಲಿ ಒಂದಷ್ಟು ಬದಲಾವಣೆ ಮಾಡಲಾಯಿತು. ಅದರ ಪ್ರಕಾರ, ಒಬ್ಬರೇ ವ್ಯಕ್ತಿ ಏಕಕಾಲದಲ್ಲಿ ಟಾಟಾ ಟ್ರಸ್ಟ್ಸ್ ಮತ್ತು ಟಾಟಾ ಸನ್ಸ್ ಛೇರ್ಮನ್ ಆಗುವಂತಿಲ್ಲ.
ರತನ್ ಟಾಟಾ ಅವರು 2016ರಲ್ಲಿ ಟಾಟಾ ಸನ್ಸ್ ಛೇರ್ಮನ್ ಸ್ಥಾನದಿಂದ ಇಳಿಯುವ ಮುನ್ನ ಎರಡೂ ಸಂಸ್ಥೆಗಳಿಗೆ ಛೇರ್ಮನ್ ಆಗಿದ್ದರು. ಅದಾದ ಬಳಿಕ ಎರಡಕ್ಕೂ ಒಬ್ಬ ವ್ಯಕ್ತಿಯೇ ಮುಖ್ಯಸ್ಥರಾಗಿದ್ದಿಲ್ಲ.
ಸದ್ಯ ಟಾಟಾ ಸನ್ಸ್ ಛೇರ್ಮನ್ ಸ್ಥಾನದಲ್ಲಿ ಎನ್ ಚಂದ್ರಶೇಖರನ್ ಇದ್ದಾರೆ. ಕುತೂಹಲ ಎಂದರೆ ಟಾಟಾ ಕುಟುಂಬದ ಹೊರಗಿನ ವ್ಯಕ್ತಿಯೊಬ್ಬರು ಆ ಸ್ಥಾನ ಅಲಂಕರಿಸಿರುವುದು ಇದೇ ಮೊದಲು.
ರತನ್ ಟಾಟಾ ಅವರ ತಂದೆ ನವಲ್ ಟಾಟಾ ಅವರ ಎರಡನೇ ಪತ್ನಿಯ ಮಗ ಈ ನೋಯಲ್ ಟಾಟಾ. ನವಲ್ ಟಾಟಾ ಮೊದಲು ಸೋನೂ ಎಂಬಾಕೆಯನ್ನು ಮದುವೆಯಾಗಿದ್ದರು.
ಅವರಿಗೆ ಹುಟ್ಟಿದವರು ರತನ್ ಮತ್ತು ಜಿಮ್ಮಿ ಟಾಟಾ. ಸೋನೂಗೆ ಡಿವೋರ್ಸ್ ಕೊಟ್ಟ ಬಳಿಕ ನವಲ್ ಅವರು ಸಿಮೋನ್ರನ್ನು ಮದುವೆಯಾದರು. ಅವರಿಗೆ ಹುಟ್ಟಿದವರು ನೋಯಲ್ ಟಾಟಾ.
2019ರಲ್ಲಿ ನೋಯಲ್ ಟಾಟಾ ಅವರನ್ನು ಸರ್ ರತನ್ ಟಾಟಾ ಟ್ರಸ್ಟ್ನ ಟ್ರಸ್ಟಿ ಆಗಿ ಮಾಡಲಾಯಿತು. ಆಗಲೂ ನೋಯಲ್ ಬಗ್ಗೆ ನಿರೀಕ್ಷೆಗಳೆದ್ದವು.
2022ರಲ್ಲಿ ಟಾಟಾ ಗ್ರೂಪ್ನ ಇನ್ನೊಂದು ಪ್ರಮುಖ ಟ್ರಸ್ಟ್ ಆದ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ಗೆ ನೋಯಲ್ ಟ್ರಸ್ಟೀ ಆದರು. ಈಗ ಎರಡೂ ಟ್ರಸ್ಟ್ಗಳಿಗೂ ನೋಯಲ್ ಟಾಟಾ ಛೇರ್ಮನ್ ಆಗಿದ್ದಾರೆ.
ಟಾಟಾ ಗ್ರೂಪ್ನ ಸಂಪೂರ್ಣ ನಿಯಂತ್ರಣ ಟಾಟಾ ಟ್ರಸ್ಟ್ಗೆ ಇದೆ. ಇದು ಟಾಟಾ ಗ್ರೂಪ್ನ ಪವರ್ ಸೆಂಟರ್ ಆದರೂ ರಿಯಲ್ ಪವರ್ ಇರುವುದು ಟಾಟಾ ಸನ್ಸ್ನಲ್ಲಿ.
ಟಾಟಾ ಗ್ರೂಪ್ನ ಮೇಲೆ ಒಬ್ಬನೇ ವ್ಯಕ್ತಿ ಏಕಸ್ವಾಮ್ಯ ಸಾಧಿಸಬಾರದು ಎಂಬ ಉದ್ದೇಶದಿಂದಲೋ ಏನೋ ಟಾಟಾ ಸನ್ಸ್ನ ಕಾನೂನಿನಲ್ಲಿ 2022ರಲ್ಲಿ ಬದಲಾವಣೆ ಮಾಡಲಾಗಿದೆ.